ಹೊಸ ವರ್ಷಕ್ಕೆ ವಾಯುಮಾಲಿನ್ಯ ಸವಾಲು

ನವದೆಹಲಿ,ಡಿ.೨೯- ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಉದಯವಾಗಲಿದೆ. ಆದರೆ, ಆರಂಭದಲ್ಲೇ ಜಗತ್ತಿನಾದ್ಯಂತ ವಾಯುಮಾಲಿನ್ಯ ತಡೆಗಟ್ಟುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಈ ವರ್ಷ ಇಡೀ ವಿಶ್ವವನ್ನೇ ಮಾರಕ ಕೊರೊನಾ ಸೋಂಕು ಕಾಡಿದೆ. ಸೋಂಕಿನ ವಿರುದ್ಧ ಬಹುತೇಕ ರಾಷ್ಟ್ರಗಳು ಸಮರವನ್ನೇ ಸಾರಿದ್ದವು. ಸೋಂಕು ತಡೆಗೆ ಜನರು ಹೋರಾಟ ನಡೆಸಿರುವುದು ಮಾತ್ರವಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಇಡೀ ವಿಶ್ವವೇ ಹೋರಾಟ ನಡೆಸಿರುವುದು ನಮ್ಮ ಕಣ್ಣ ಮುಂದೆ ಇದೆ. ಆದರೆ, ಹೊಸ ವರ್ಷದಲ್ಲಿ ವಾಯುಮಾಲಿನ್ಯ ತಡೆಯುವ ದೊಡ್ಡ ಸವಾಲು ಇಡೀ ವಿಶ್ವದ ಜನರ ಮುಂದೆ ಕಾಯುತ್ತಿದೆ.
ಸಾಂಕ್ರಾಮಿಕ ರೋಗ ಇಡೀ ವಿಶ್ವದ ಮೇಲೆ ಪ್ರಮುಖವಾಗಿ ಪ್ರಭಾವ ಬೀರುತ್ತಿದೆ.
ಆರಂಭದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಇದರ ಪರಿಣಾಮ ಜಗತ್ತಿನಾದ್ಯಂತ ವಾಯುಮಾಲಿನ್ಯ ಮಟ್ಟ ಅತ್ಯಂತ ಕಡಿಮೆ ಇತ್ತು.
ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ರೆಸಾರ್ಟ್‌ಗಳನ್ನು ಬಂದ್ ಮಾಡಲಾಗಿತ್ತು, ಇದರಿಂದಾಗಿ ತ್ಯಾಜ್ಯಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿತ್ತು.
ವಾಯುಮಾಲಿನ್ಯ ಮತ್ತು ತ್ಯಾಜ್ಯ ಇಳಿಕೆಯಾಗಲು ಮತ್ತೊಂದು ಪ್ರಮುಖ ಅಂಶವೆಂದರೆ ಲಾಕ್‌ಡೌನ್ ಸಂದರ್ಭದಲ್ಲಿ ಕೈಗಾರಿಕಾಗಳು ಬಂದ್ ಆಗಿದ್ದವು. ಈ ಕೈಗಾರಿಕೆಗಳಿಂದ ಹೊರ ಸೂಸುವ ತ್ಯಾಜ್ಯ ಮತ್ತು ರಾಸಾಯನಿಕ ವಸ್ತುಗಳು ಹೆಚ್ಚಾಗಿ ಹೊರ ಸೂಸಲಿಲ್ಲ.
ಒಂದು ವೇಳೆ ಕೈಗಾರಿಕೆಗಳು ಕಾರ್ಯನಿರ್ವಹಿಸಿದ್ದರೆ, ವಾಯು, ನೀರು ಮತ್ತು ಭೂಮಿಯ ಮೇಲೆ ವಾಯುಮಾಲಿನ್ಯ ಉಂಟಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಪ್ರಾಣಹಾನಿಯಾಗುತ್ತಿದ್ದವು. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಕೈಗಾರಿಕೆಗಳು ಮುಚ್ಚಿದ್ದರಿಂದ ಪರಿಸರದ ಮೇಲೆ ಉಂಟಾಗಿದ್ದ ಪ್ರತಿಕೂಲ ಪರಿಣಾಮ ಕಡಿಮೆಯಾಗಿತ್ತು, ಈಗ ಹೊಸ ವರ್ಷದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳು ಕಾರ್ಯಾಚರಣೆಗೆ ಸಜ್ಜುಗೊಳ್ಳುತ್ತಿದ್ದು, ಇದರಿಂದ ಹೊರ ಹೊಮ್ಮುವ ಕಲುಷಿತ ಹಾಗೂ ತ್ಯಾಜ್ಯ ವಸ್ತುಗಳಿಂದ ವಾಯುಮಾಲಿನ್ಯ ಉಂಟಾಗಲಿದ್ದು, ಇದನ್ನು ನಿಯಂತ್ರಿಸಲು ಹೊಸ ವರ್ಷದ ಆರಂಭದಲೇ ಸವಾಲುಗಳು ಎದುರಾಗಲಿವೆ.