ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ

ಬೆಂಗಳೂರು, ಡಿ.28- ನೂತನ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಅವಕಾಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.
ಹೊಸ ವರ್ಷದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಜೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು‌‌‌ ಆಗಮಿಸುತ್ತಾರೆ. ಕೊಡುವ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಮೆಟ್ಟಿಲುಗಳ ಮೇಲೆ ಬರುವ ಭಕ್ತರಿಗೂ ಈ ನಿಷೇಧ ವಿಧಿಸಲಾಗಿದೆ.
ನಂಜನಗೂಡು ನಂಜುಂಡೇಶ್ವರ ದೇವಾಲಯ ಎಂದಿನಂತೆ ತೆರದಿರಲಿದೆ. ಆದರೆ, ಹೆಚ್.ಡಿ.ಕೋಟೆಯ ಚಿಕ್ಕದೇವರಮ್ಮ ದೇವಾಲಯ ಕೂಡ ಭಕ್ತರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಅಲ್ಲದೇ, ಕೆ.ಆರ್.ನಗರದಲ್ಲಿ ಹೊಸ ವರ್ಷದ ದಿನ ನಡೆಯುವ ದನಗಳ ಜಾತ್ರೆ ರದ್ದುಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ದರ್ಶನ, ಸೇವೆ ಯಥಾಸ್ಥಿತಿ ಮುಂದುವರೆಯಲಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಸಮಯದಲ್ಲೂ ಯಾವುದೇ ವ್ಯತ್ಯಾಸವಿಲ್ಲದೇ, ಎಲ್ಲ ಸೇವೆ ಮುಂದುವರೆಸಲಾ ಗುವುದು. ವರ್ಷದ ಆರಂಭದ ದಿನದಲ್ಲಿ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದ್ದು, ಎಂದಿನಂತೆ ದೇವರ ಸೇವಾ ಹರಕೆಗಳು ನಡೆಯಲಿದೆ. ಆದರೆ, ದೇವಾಲಯದ ಒಳಭಾಗದಲ್ಲಿ ಕೋವಿಡ್ ನಿಯಮಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಲು ಎಲ್ಲ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಹೊಸ ವರ್ಷಕ್ಕೆ ಯಾವುದೇ ನಿಷೇಧವಿಲ್ಲ. ಹೊಸ ವರ್ಷಕ್ಕೆ ದೇವಾಲಯಕ್ಕೆ ಬರಬಹುದಾಗಿದ್ದು, ಪ್ರವಾಸಿಗರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ದೇವಾಲಯದಿಂದ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.