ಹೊಸ ರೂಪದ ಕೊರೊನಾ ಪಾದರಾಯನಪುರದಲ್ಲಿ ಜನ ಜಾಗೃತಿ

ಬೆಂಗಳೂರು, ಡಿ.೨೮- ಬ್ರಿಟನ್ ದೇಶದ ರೂಪಾಂತರ ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆ ನಗರದ ಪಾದರಾಯನಪುರದ ನಿವಾಸಿಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ವಿಶೇಷ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.

ಕೊರೋನಾ ಸೋಂಕು ಆರಂಭ ಹಂತದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಪಾದರಾಯನಪುರ ಪ್ರದೇಶದಲ್ಲಿ, ಸದ್ಯ ಕೋವಿಡ್ ಪ್ರಕರಣಗಳು ಗಣನೀಯವಾಗಿ ಸಂಪೂರ್ಣವಾಗಿ ಇಳಿಕೆ ಕಂಡಿವೆ. ಇದೀಗ ಮತ್ತೆ ರೂಪಾಂತರ ಕೊರೋನಾ ಸೋಂಕು ಹರಡುವ ಆತಂಕ ಎದುರಾಗುತ್ತಿರುವ ಹಿನ್ನೆಲೆ ಸ್ವಯಂಪ್ರೇರಿತವಾಗಿ ಅಲ್ಲಿನ ನಿವಾಸಿಗಳು ಎಚ್ಚರವಹಿಸಿ, ಹೊರಭಾಗಗಳಲ್ಲಿ ಆಗಮಿಸುವವರ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷಾ, ಆರಂಭದಲ್ಲಿ ಕೆಲ ಸಣ್ಣ ಘಟನೆಗಳನ್ನೆ ಬಿಂಬಿಸಿ ಕೆಲವರು ಅಪಪ್ರಚಾರ ಮಾಡಿದ ಕಾರಣ ಇಲ್ಲಿನ ನಿವಾಸಿಗಳು ಭಾರೀ ತೊಂದರೆಗೆ ಸಿಲುಕಿದರು.

ಹಾಗಾಗಿ, ಈ ಬಾರಿ ಎಚ್ಚರವಹಿಸಿ ಜಾಗೃತಿ ಮೂಡಿಸುತ್ತಿದ್ದು, ಹೊರಭಾಗಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿರುವುದಲ್ಲದೆ, ಅವರ ಮಾಹಿತಿಯನ್ನು ಬಿಬಿಎಂಪಿ ಅಥವಾ ಪೊಲೀಸರಿಗೆ ನೀಡಲಾಗುವುದು ಎಂದು ತಿಳಿಸಿದರು.

ಇಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಜನಸಂದಣಿಯೂ ಅಧಿಕವಾಗಿದೆ. ಆದರೂ, ವ್ಯಾಪಾರ ವಾಹಿವಾಟು ನಡೆಯುವ ಕಡೆ ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಜತೆಗೆ, ಪ್ರಾರ್ಥನಾ ಕೇಂದ್ರಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.