ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಬದಲು ಲೋಪ ಬಹಿರಂಗಪಡಿಸಿ: ನಮೋಶಿ ಆಗ್ರಹ

ಕಲಬುರಗಿ,ಸೆ.15: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿಚಾರದಲ್ಲಿ ರಾಜಕಾರಣ ಮಾಡುವ ಬದಲು ಅದರಲ್ಲಿನ ಲೋಪಗಳ ಬಗ್ಗೆ ರಾಜ್ಯ ಸರ್ಕಾರ ಬಹಿರಂಗವಾಗಿ ದಾಖಲೆ ಸಮೇತ ಬಹಿರಂಗಪಡಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಕ್ಕೆ ತಮ್ಮ ಬಳಿ ಪರ್ಯಾಯವಾದ ಅವಕಾಶಗಳು ಏನಿವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಯಾವುದೇ ಚರ್ಚೆಗಳು, ಜನರ ಅಭಿಪ್ರಾಯಗಳು ಇಲ್ಲದೇ ಎನ್‍ಇಪಿ ರದ್ದುಗೊಳಿಸಲು ಮುಂದಾಗಿರುವುದು ಕೆಟ್ಟ ನಿರ್ಧಾರ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯಿಸಿದರ.
ಬಡವ ಶ್ರೀಮಂತರ ಮಕ್ಕಳು ಎನ್ನದೇ ಎಲ್ಲ ವರ್ಗ, ಸಮುದಾಯ, ಪ್ರದೇಶದ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಮುಂದಿನ ವರ್ಷ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಸಿಸಿದ್ದಾರೆ. ದುರಂತವೆಂದರೆ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಿದಲ್ಲಿದ್ದಾಗ ಭವಿಷ್ಯದ ಬಗ್ಗೆ ಆಲೋಚನೆಗಳಿಲ್ಲದೇ, ಯಾವುದೇ ಮಹತ್ವದ ಸುಧಾರಣೆ, ಬದಲಾವಣೆಗಳನ್ನು ತಾರದೆ ಅಮೂಲ್ಯ ಐದುವರೆ ದಶಕಗಳನ್ನು ಈ ಹಿಂದಿನ ಸರ್ಕಾರದ ನಾಯಕರು ವ್ಯರ್ಥ ಮಾಡಿದ್ದಾರೆ. ಆದರೆ, ಜನರ ಅಭೂತಪೂರ್ವ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಶಿಕ್ಷಣದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಹಲವು ವರ್ಷಗಳವರೆಗೆ ಅಧ್ಯಯನ ನಡೆಸಿ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀತಿ ರೂಪಿಸಿದ್ದಾರೆ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಮತ್ತು ಸಮಾನ ಶಿಕ್ಷಣಕ್ಕೆ ನೂತನ ಶಿಕ್ಷಣ ನೀತಿ ಸಮರ್ಥವಾಗಿದೆ. ಇಂತಹ ನೀತಿಯನ್ನು ರಾಜ್ಯದಲ್ಲಿ ರದ್ದುಗೊಳಿಸಿದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಬಹುದೊಡ್ಡ ಶೈಕ್ಷಣಿಕ ಅನ್ಯಾಯ ಮಾಡಿದಂತಾಗುತ್ತದೆ. ಸಿಬಿಎಸ್‍ಇ ಪಠ್ಯಕ್ರಮದ ಖಾಸಗಿ ಶಾಲೆಗಳು ಈಗಾಗಲೇ ಎನ್‍ಇಪಿ-2020 ಅಳವಡಿಸಿಕೊಂಡಿವೆ. ಅದರಲ್ಲೂ ಎನ್‍ಇಪಿ ವಿರೋಧಿಸುವ ಶಾಸಕರ ಶಾಲೆಗಳಲ್ಲೇ ಎನ್‍ಇಪಿ ಪಠ್ಯಕ್ರಮ ಪಠ್ಯಕ್ರಮ, ಪೂರಕವಾದ ಚಟುವಟಿಕೆಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆಯ ಕೊರತೆ ಕಾರಣ ಅನಿವಾರ್ಯವಾಗಿ ಬಾಗಿಲು ಹಾಕಲಾಗಿದೆ. ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನು ಬಲಪಡಿಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಧನಾತ್ಮಕ ಅಂಶಗಳನ್ನು ಎನ್‍ಇಪಿ ಹೊಂದಿದೆ. ಸರ್ಕಾರಿ ಶಾಲೆಗಳ ಪೈಕಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಹೊರತುಪಡಿಸಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶಿಕ್ಷಣ ಒಂದನೇ ತರಗತಿಯಿಂದ ಆರಂಭವಾಗುತ್ತಿದೆ. ಆದರೆ, ಮಗುವಿಗೆ ಮೂರನೇ ವರ್ಷದಿಂದಲೇ ಶಿಕ್ಷಣ ವ್ಯವಸ್ಥೆಯೊಳಗೆ ಕರೆತರುವ ಬುನಾದಿ ಹಂತದ ಶಿಕ್ಷಣ/ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎನ್‍ಇಪಿ ಹೊಂದಿದೆ. ಅದಕ್ಕಾಗಿ ಅಂಗನವಾಡಿ ಕೇಂದ್ರಗಳನ್ನು ಬುನಾದಿ ಹಂತದ ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಹಾಲಿ ಅಂಗನವಾಡಿಗಳಲ್ಲಿ ಆರೈಕೆ, ಪೌಷ್ಠಿಕ ಆಹಾರ, ಆರೋಗ್ಯದ ಕಡೆ ಗಮನ ಹಾಗೂ ಚಿಲಿಪಿಲಿ ಮೂಲಕ ಅಕ್ಷರಜ್ಞಾನ, ಲಘು, ಆಟಗಳು, ಚಟುವಡಿಕೆಗಳನ್ನು ಮಾಡಿಸಲಾಗುತ್ತಿದೆ. ಆದರೆ, ಎನ್‍ಇಪಿಯು ಇದಕ್ಕೆಂದೇ ಶೈಕ್ಷಣಿಕ ಚೌಕಟ್ಟನ್ನು ಹೊಂದುವುದಕ್ಕೆ ಒತ್ತು ನೀಡಿದೆ. ಆಡುತ್ತಾ ಕಲಿಯುವ, ನಲಿಯುತ್ತಾ ಕಲಿಯುವ, ಆಟಿಕೆಗಳ ಮೂಲಕ ಕಲಿಯುವ ವಾತಾವರಣ ಹಾಗೂ ಸಮಗ್ರ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಶಿಕ್ಷಣ ಗೋಳಲ್ಲ, ಗೌರವ ಎನ್ನುವುದನ್ನು ಸಾರುವ ಎನ್‍ಇಪಿ-2020: ವಿದೇಶಗಳಲ್ಲಿ ಶಾಲೆಗೆ ಹೋಗಲು ಮಕ್ಕಳ ಪತಿರೋದ ಕಡಿಮೆ. ಶಿಕ್ಷಣ ಕೇಂದ್ರಗಳಾಗಿ ಅಭಿವೃದ್ದಿಪಡಿಸುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿದೆ ಎಂದು ಅವರು ಪ್ರತಿಪಾದಿಸಿದರು.
ಅಂಗನವಾಡಿಗಳ ಜವಾಬ್ದಾರಿಯನ್ನು ‘ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರನ್ನಾಗಿಸಲು ಅವರ ಬೋಧನಾ ಸ್ಥರವನ್ನು ಮೇಲ್ದರ್ಜೆಗೆ ಏರಿಸಲು ಎನ್‍ಇಪಿ ಒತ್ತು ನೀಡಿದೆ. ಪೂರ್ವ ಪ್ರಾಥಮಿಕ ಶಿಕ್ಷಕರಾಗಿ ರೂಪಿಸಲು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಪೈಕಿ 10ನೇ ತರಗತಿ ಮುಗಿಸಿರುವ ಕಾರ್ಯಕರ್ತಕರಿಗೆ 6 ತಿಂಗಳ ತರಬೇತಿ ನೀಡುವುದನ್ನು ಪ್ರಸ್ತಾಪಿಸಲಾಗಿದೆ. ಹಂತ ಹಂತವಾಗಿ ಈಗ ಇರುವ ಅಂಗನಾಡಿ ಕಾರ್ಯಕರ್ತರನ್ನೇ ಶಿಕ್ಷಕರನ್ನಾಗಿಸುವುದು ಹಾಗೂ ಅವರ ಗುಣಮಟ್ಟವನ್ನು ಉನ್ನತಗೊಳಿಸುವ ಅಂಶಗಳನ್ನು ಎನ್‍ಇಪಿ ಹೊಂದಿದೆ. ವೈಜ್ಞಾನಿಕ ಕಲಿಕಾ ವಿಧಾನಗಳು ನಿರ್ಧಾರಿತ ಗುಣಮಟ್ಟದ ಮೂಲಸೌಕರ್ಯ ಮತ್ತು ಕಟ್ಟಡಗಳು ಇರುವ ಬಗ್ಗೆ ಎನ್‍ಇಪಿ ತಿಳಿಸಿದೆ. ಇದರಿಂದ ಮಗುವಿಗೆ 3 ವರ್ಷ ದಾಟುತ್ತಿದ್ದಂತೆಯೇ ಖಾಸಗಿ ಕೇಂದ್ರಗಳಿಗೆ ತೆರಳುವ ಮಕ್ಕಳಂತೆ ಬಡವರ ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುತ್ತದೆ. ಒಂದು ವೇಳೆ ಎನ್‍ಇಪಿ ರದ್ದುಪಡಿಸಿದರೆ ಶಿಕ್ಷಣದಲ್ಲಿ ತಾರತಮ್ಯ ಮುಂದುವರೆಸಿದಂತಾಗುತ್ತದೆ. ಶ್ರೀಮಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ. ಉಳಿದವರ ಮಕ್ಕಳಿಗೆ ಭವಿಷ್ಯದ ಆಲೋಚನೆಗಳು ಇಲ್ಲದ ಶಿಕ್ಷಣ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಅನೇಕ ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ಏಳನೇ ತರಗತಿಯಲ್ಲಿ ಓದುತ್ತಿರುವ ಮಗುವಿಗೆ 2-3ನೇ ತರಗತಿ ಮಟ್ಟದ ಓದು ಬರಹ, ಲೆಕ್ಕ ಸಂಖ್ಯಾಜ್ಞಾನ ಇಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಪರಿಹಾರವಾಗಿ ಮಕ್ಕಳಿಗೆ ಓದಲು, ಬರೆಯಲು, ಸಂಖ್ಯಾ ಜ್ಞಾನದೊಂದಿಗೆ ಲೆಕ್ಕ ಮಾಡುವ ಸಾಮಥ್ರ್ಯವನ್ನು ವೃದ್ಧಿಸಲು ಬುನಾದಿ ಹಂತದ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಅಭಿಯಾನವನ್ನು ಎನ್‍ಇಪಿ ಮೂಲಕ ಕೈಗೊಳ್ಳಲಾಗಿದೆ. ದೇಶದ ನಿರುದ್ಯೋಗ ಸಮಸ್ಯೆಗೆ ಕೌಶಲ್ಯ ಇಲ್ಲದಿರುವುದು ಪ್ರಮುಖ ಕಾರಣ.ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳಿಗೆ ತಕ್ಕಂತೆ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಅದಕ್ಕಾಗಿಯೇ ಶಾಲಾ ಶಿಕ್ಷಣ ಹಂತದಲ್ಲಿಯೇ ಮಕ್ಕಳಿಗೆ ಕನಿಷ್ಠ ಒಂದು ವೃತ್ತಿಪರ ಶಿಕ್ಷಣ ಕೌಶಲ್ಯವನ್ನು ನೀಡುವುದನ್ನು ಎನ್‍ಇಪಿ ಪ್ರತಿಪಾದಿಸಿದೆ. ಸಾಧ್ಯವಾದರೆ 6ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣ ಆರಂಭಿಸುವ ಶಿಫಾರಸ್ಸು ಕೂಡ ಎನ್‍ಇಪಿಯಲ್ಲಿ ಇದೆ. ರಾಷ್ಟ್ರೀಯ ಕೌಶಲ್ಯ ಗುಣಮಟ್ಟ ಚೌಕಟ್ಟನ್ನು (ಓSಕಿಈ ಶಾಲಾ ಶಿಕ್ಷಣದಿಂದಲೇ ಜಾರಿ ಮಾಡುವ ಅಗತ್ಯವಿದೆ. ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಹೊಂದುವುದು ಎನ್‍ಇಪಿಯ ಮೂಲ ವಿಷಯವಾಗಿದೆ ವೃತ್ತಿಪರ ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಕಲಿಸಬೇಕು. ಸ್ಥಳೀಯವಾಗಿ ಲಭ್ಯವಾಗುವ, ಸೃಷ್ಟಿಸಬಹುದಾದ ಉದ್ಯೋಗಗಳನ್ನು ಮಾಡಲು ಬೇಕಾದ ಕೌಶಲ್ಯವನ್ನು ಶಾಲಾ ಶಿಕ್ಷಣ ಹಂತದಲ್ಲಿ ನೀಡಬೇಕು ಎಂದು ಎನ್‍ಇಪಿ ಹೇಳಿದೆ ಎಂದು ಅವರು ತಿಳಿಸಿದರು.
ಈಗ ಎನ್‍ಇಪಿ ರದ್ದುಗೊಳಿಸಿದರೆ ಈ ನೀತಿಯಡಿ ವ್ಯಾಸಂಗ ಮಾಡಿರುವ ಉನ್ನತ ಶಿಕ್ಷಣದ ಎರಡು ಬ್ಯಾಚಿನ ವಿದ್ಯಾರ್ಥಿಗಳು ಅತಂತ್ರವಾಗಲಿದ್ದಾರೆ. ಶೈಕ್ಷಣಿಕ ಸಮುದಾಯದಲ್ಲಿ ಅನಾವಶ್ಯಕವಾಗಿ ಗೊಂದಲ ನಿರ್ಮಾಣವಾಗುತ್ತದೆ. ಶೈಕ್ಷಣಿಕ ಸುಧಾರಣೆಯ ವೇಗ ಕುಂಠಿತಗೊಳ್ಳುತ್ತದೆ. ಹಲವು ವರ್ಷಗಳಿಂದ ಹಾಕಿರುವ ಶ್ರಮ, ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಕಾರಣ ಎನ್‍ಇಪಿಯನ್ನು ರದ್ದುಪಡಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಶರಣು ಸಜ್ಜನ್, ಅಣವೀರ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.