ಹೊಸ ಮೊಬೈಲ್ ವಿತರಿಸಲು ಒತ್ತಾಯ

ಭಾಲ್ಕಿ:ಜು.11: ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರ ಸಂಘ ಪಟ್ಟಣದಲ್ಲಿ ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿತು.

ಪಟ್ಟಣದ ಚನ್ನಬಸವಾಶ್ರಮದಿಂದ ತಹಸೀಲ್ ಕಚೇರಿ ವರೆಗೂ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮಿಂಚಿನ ಪ್ರತಿಭಟನೆ ನಡೆಸಿದರು.

ತಹಸೀಲ್ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಕೆಲಕಾಲ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ನಂತರ ತಹಸೀಲ್ದಾರ ಮೂಲಕ ಪಿಎಂಗೆ ಮನವಿ ಪತ್ರ ಸಲ್ಲಿಸಿ, ಸರಕಾರ ನೀಡಿರುವ ಮೊಬೈಲ್‍ಗಳಲ್ಲಿ ನೆಟ್‍ವರ್ಕ್, ರ್ಯಾಮ್, ಸ್ಟೋರೇಜ್ ಸಮಸ್ಯೆ ಇದೆ. ಹೊಸ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿಲ್ಲ

ಪ್ರತಿನಿತ್ಯ ಮಕ್ಕಳ, ಪೆÇೀಷಕರ ಹಾಜರಾತಿ, ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಅಪ್‍ಲೋಡ್ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ.

ಈಗಾಗಲೇ ನಾಲ್ಕು ವರ್ಷಗಳ ಹಿಂದೆ ನೀಡಿರುವ ಮೊಬೈಲ್‍ಗಳು ಹಾಳಾಗಿವೆ. ಆದ್ದರಿಂದ, ಆರೋಗ್ಯ ಸಮೀಕ್ಷೆ ಕೈಗೊಳ್ಳಲು ಹೊಸ ಮೊಬೈಲ್‍ಗಳನ್ನು ನೀಡಬೇಕು. ಇಲ್ಲವಾದರೆ, ಕೈಪಿಡಿಯಲ್ಲಿ ದಾಖಲಿಸಲು ಅವಕಾಶ ನೀಡಬೇಕು. ಹಿಂದಿನ ಬಜೆಟ್‍ನಲ್ಲಿ ಘೋಷಿಸಿರುವ 1 ಸಾವಿರ ಗೌರವಧನವನ್ನು ಕೂಡಲೇ ಪಾವತಿ ಮಾಡಬೇಕು. ಕನಿಷ್ಠ ವೇತನ ಜಾರಿ, ಸಾಮಾಜಿಕ ಭದ್ರತೆ, ಏಕ ರೂಪದ ಸೇವಾ ನಿಯಮ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಶೀಲಾ ಹತ್ತಿ, ಉಪಾಧ್ಯಕ್ಷೆ ಅನಿತಾ ಪಸರಗೆ, ಖಜಾಂಚಿ ಈಶ್ವರಮ್ಮ ಮಠಪತಿ, ಕಾರ್ಯದರ್ಶಿ ಪೂಜಾಶೀಲಾ ಭಾವಿಕಟ್ಟಿ ಸೇರಿದಂತೆ ನೂರಾರು ಅಂಗವಾಡಿ ಕಾರ್ಯಕರ್ತೆಯರು ಹಾಜರಿದ್ದರು.