ಹೊಸ ಮದ್ಯದಂಗಡಿ ಸ್ಥಾಪನೆ ಎಚ್‌ಡಿಕೆ ವಿರೋಧ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨೪:ಪ್ರತಿಗ್ರಾಮ ಪಂಚಾಯ್ತಿಯಲ್ಲೂ ಮದ್ಯದಂಗಡಿ ತೆರೆಯಲು ಮುಂದಾಗಿರುವ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದ್ದಾರೆ.೩ ಸಾವಿರ ಜನಸಂಖ್ಯೆಯುಳ್ಳ ಪ್ರತಿ ಗ್ರಾಮಪಂಚಾಯ್ತಿಗೆ ಮದ್ಯದಂಗಡಿಯನ್ನು ಮಂಜೂರು ಮಾಡುವ ಅಬಕಾರಿ ಇಲಾಖೆಯ ಹೊಸ ಪ್ರಸ್ತಾವನೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಿತ್ತು. ಗೆದ್ದ ನಂತರ ಕರ್ನಾಟಕ ಕುಡುಕರ ತೋಟ ಎನ್ನುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಖೊಟ್ಟಿ ಗ್ಯಾರಂಟಿಯಿಂದ ಜನರನ್ನು ಯಾಮಾರಿಸಿದ್ದು ಸಾಲದು ಎಂಬಂತೆ ಪ್ರತಿ ಪಂಚಾಯ್ತಿಯಲ್ಲೂ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು, ದವಸ-ಧಾನ್ಯ, ಹಣ್ಣು-ತರಕಾರಿ, ಹಾಲು ಮಾರಾಟ ಮಾಡುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ಅಸಹ್ಯದ ಪರಮಾವಧಿ ಇದಾ ಸಮಾಜವಾದ ಎಂದು ಟೀಕಿಸಿದ್ದಾರೆ.ನಾರಿಯರಿಗೆ ಶಕ್ತಿ ತುಂಬಿಸುತ್ತೇವೆ ಎಂದ ಸರ್ಕಾರ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ಗೃಹಜ್ಯೋತಿ ಎಂದ ಸರ್ಕಾರ ಅವರ ಬಾಳ ಜ್ಯೋತಿಯನ್ನೇ ನಂದಿಸುತ್ತಿದೆ. ಅನ್ನಭಾಗ್ಯವೆಂದ ಸರ್ಕಾರ ಈಗ ಮದ್ಯ ಭಾಗ್ಯ ಎನ್ನುತ್ತಿದೆ. ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಸಂಚಕಾರ ಎದುರಾಗಿದೆ. ಇದು ಮನೆ ಹಾಳು ಸರ್ಕಾರ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಜ್ಯದ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಅಬಕಾರಿ ಇಲಾಖೆ ಪ್ರತಿ ೩ ಸಾವಿರ ಜನಸಂಖ್ಯೆಯುಳ್ಳ ಗ್ರಾಮಪಂಚಾಯ್ತಿಗಳಿಗೆ ಮದ್ಯ ಮಾರಾಟದ ಪರಾವನಗಿ ನೀಡಲು ಪ್ರಸ್ತಾವ ಸಿದ್ಧಪಡಿಸಿತ್ತು. ಈ ಮೊದಲು ೫ ಸಾವಿರ ಗ್ರಾಮಪಂಚಾಯ್ತಿಗೆ ಒಂದು ಮದ್ಯದಂಗಡಿ ಮಂಜೂರು ಮಾಡಲು ಅವಕಾಶವಿತ್ತು. ಈಗ ಕಾನೂನಿಗೆ ತಿದ್ದುಪಡಿ ತಂದು ೩ ಸಾವಿರ ಜನಸಂಖ್ಯೆಯುಳ್ಳ ಗ್ರಾಮಪಂಚಾಯ್ತಿಗೆ ಒಂದು ಮದ್ಯದಂಗಡಿ ಲೈಸೆನ್ಸ್ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸರ್ಕಾರ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಇದು ಪ್ರಸ್ತಾವನೆ ಹಂತದಲ್ಲೇ ಇದೆಯಾದರೂ ಈ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.