ಕಲಬುರಗಿ,ಅ.3:ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ಪ್ರಾರಂಭಿಸುವ ಕುರಿತ ರಾಜ್ಯ ಸರ್ಕಾರದ ನಿರ್ಧಾರವನ್ನು ಆಳಂದ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಹಾಗೂ ರಾಜ್ಯ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ್ ಅವರು ಬಹಿರಂಗವಾಗಿಯೇ ತೀವ್ರ ವಿರೋಧ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಸಂಪನ್ಮೂಲಗಳ ಕೊರತೆ ಇದೆ. ಆದಾಗ್ಯೂ, ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದಾಗ್ಯೂ, ಪಾಪದ ಹಣದಲ್ಲಿ ಸರ್ಕಾರ ನಡೆಸುವುದು ನೈತಿಕವಾಗಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಹೊಸ ಮದ್ಯದಂಗಡಿಗಳನ್ನು ಆರಂಭಿಸುವುದಕ್ಕೆ ಸರಿಯಲ್ಲ. ಇದನ್ನು ನಾನು ವಿರೋಧಿಸುವೆ ಎಂದು ಹೇಳಿದ ಅವರು, ರಾಜ್ಯ ಸರ್ಕಾರವು 36 ಸಾವಿರ ಕೋಟಿ ರೂ.ಗಳ ಕರ ಸಂಗ್ರಹ ಮಾಡಲು ಬೇರೆ, ಬೇರೆ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕಿತ್ತು. ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ.ಅದನ್ನು ಬಿಪಿಎಲ್ ಕಾರ್ಡ್‍ದಾರರಿಗೆ ಮಾತ್ರ ಘೋಷಣೆ ಮಾಡಬೇಕಿತ್ತು. ಎಪಿಎಲ್ ಕಾರ್ಡ್‍ದಾರರಿಗೂ ಯೋಜನೆಗಳ ಅವಶ್ಯಕತೆ ಇರಲಿಲ್ಲ. ಮದ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕೆ ಹೆಚ್ಚಿಸುತ್ತಾರೆ? ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಗಳಿದ್ದರೆ ಬೇರೆ ಮಾರ್ಗ ಹುಡುಕಬೇಕು. ನನ್ನಂತವರಿಗೂ ಉಚಿತ ವಿದ್ಯುತ್ ನೀಡುವ ಅಗತ್ಯ ಇಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮರ್ಥ ಆರ್ಥಿಕ ತಜ್ಞರಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದರು.
ಹೊಸ ಮದ್ಯದಂಗಡಿಗಳ ಪ್ರಾರಂಭದ ಕುರಿತು ಶಾಸಕಾಂಗ ಸಭೆಯಲ್ಲಿ ಹಾಗೂ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತುವೆ. ಒಂದು ವೇಳೆ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದೇ ಹೋದಲ್ಲಿ ನಾನೇ ಹೋರಾಟ ಮಾಡುತ್ತೇನೆ ಎಂದು ಅವರು ಎಚ್ಚರಿಸಿದರು.
ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದರಿಂದ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗಿವೆ. ಅಲ್ಲದೇ ಅಪಘಾತ ಪ್ರಕರಣಗಳು, ವಿವಿಧ ಕೌಟುಂಬಿಕ ಕಲಹಗಳೂ ಸಹ ಕಡಿಮೆಯಾಗಿವೆ. ಆ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ಇದೆ. ಹೀಗಾಗಿ ಅಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಕುಸಿಯುತ್ತಿದೆ. ಅಂತಹ ಕಾನೂನು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ಭಾರತದಲ್ಲಿಯೇ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಮದ್ಯಪಾನ ವಿರೋಧಿಸಿ ಮೇಧಾ ಪಾಟ್ಕರ್ ಅವರ ಅಧ್ಯಕ್ಷತೆಯಲ್ಲಿ ದೇಶಾದ್ಯಂತ ನಶಾ ಮುಕ್ತ ಭಾರತ ಎಂಬ ಜನಾಂದೋಲನ ಆರಂಭಿಸಿದ್ದೇವೆ. ಮಹಾತ್ಮಾಗಾಂಧಿ ಅವರ ಜನ್ಮದಿನದಂದೇ ನಗರದಿಂದಲೇ ಅಭಿಯಾನಾ ಆರಂಭಗೊಂಡಿದೆ. ಮಹಿಳೆಯರು ಮನಸ್ಸು ಮಾಡಿದರೆ ಮದ್ಯಪಾನವನ್ನು ನಿಷೇಧಿಸಬಹುದಾಗಿದೆ. ಹಾಗಾಗಿ ಅಭಿಯಾನದ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.