ಹೊಸ ಬೆಳವನೂರಿನಲ್ಲಿ ಕಸಾಪ ಸಭೆ

ದಾವಣಗೆರೆ  ಜ 19: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊಸ ಬೆಳವನೂರಿನ    ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ 9 ನೇ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪನವರ ಅಧ್ಯಕ್ಷತೆಯಲ್ಲಿ  ಆಯೋಜಿಸಲಾಗಿತ್ತು.ಸಭೆಯಲ್ಲಿ ಸುದೀರ್ಘ ಚರ್ಚೆಯೊಂದಿಗೆ  ಹೊಸ ಬೆಳವನೂರಿನ ಶ್ರೀ ಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.ಸಭೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎ ಆರ್ ಉಜ್ಜನಪ್ಪ ನವರು ಮಾತನಾಡಿ ಕನ್ನಡ ಭುವನೇಶ್ವರಿಯ ರಥ ಹೊಸ ಬೆಳವನೂರಿಗೆ  ಬರುತ್ತಿರುವುದು ಈ ಊರಿನ ಸೌಭಾಗ್ಯ. ಅದಕ್ಕಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ತಾವೆಲ್ಲರೂ ತನು ಮನ ಧನ ಸಹಾಯದಿಂದ ಕೈಜೋಡಿಸಬೇಕೆಂದು ತಿಳಿಸಿದರು. ಹಾಗೂ ಸಮ್ಮೇಳನದ ರೂಪರೇಷೆಗಳನ್ನು ಸಭೆಗೆ ತಿಳಿಸಿದರು.ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ ಮಾತನಾಡಿ ದಾವಣಗೆರೆ ತಾಲೂಕು ಸಮ್ಮೇಳನವನ್ನು ಹೊಸ ಬೆಳವನೂರಿನಲ್ಲಿ  ಸಮ್ಮೇಳನವನ್ನು  ಮಾಡಬೇಕೆಂದು ಈ ಹಿಂದೆಯೇ ತಾವುಗಳೆಲ್ಲರೂ ಅಪೇಕ್ಷೆ ಪಟ್ಟಿದ್ದಿರಿ. ಆದರೆ ಅಂದು ಇಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಹದಡಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ಅದರ ಯಶಸ್ವಿಗೆ ಈ ಗ್ರಾಮದ ಎಲ್ಲಾ ಮುಖಂಡರ ಸಾಹಿತ್ಯಾಭಿಮಾನಿಗಳ ಸಹಕಾರವು ಇತ್ತೆಂಬುದನ್ನು ಸ್ಮರಿಸಿಕೊಂಡರು. ಈಗ ನಿಮ್ಮೂರಿನಲ್ಲೇ ಸಮ್ಮೇಳನ ಮಾಡಲು ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ತಾವೆಲ್ಲರೂ ಮುಕ್ತಕಂಠದಿಂದ ಸ್ವೀಕರಿಸಿ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಿರುವುದು  ಸಂತೋಷದಾಯಕ ಎಂದು ಗ್ರಾಮದ ಎಲ್ಲರನ್ನು ಅಭಿನಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಸಮ್ಮೇಳನದ ಆಯೋಜನೆಯಲ್ಲಿ ನಿಮ್ಮೊಂದಿಗೆ ಸದಾ ಇರುತ್ತದೆ. ಎಲ್ಲರೂ ಸೇರಿ ಸಮ್ಮೇಳನವನ್ನು ಅದ್ದೂರಿಯಾಗಿ ಈ ಊರಿನ ಇತಿಹಾಸದಲ್ಲಿ ದಾಖಲಾಗುವಂತೆ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದರು.ತಾಲೂಕು ಕ ಸಾ ಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ ಮಾತನಾಡಿ  ಸಮ್ಮೇಳದಲ್ಲಿ ಸ್ಥಳೀಯ  ಕಲಾವಿದರಿಗೆ ಸಾಹಿತಿಗಳಿಗೆ ಮಕ್ಕಳಿಗೆ ರೈತರಿಗೆ ಹೆಚ್ಚು ಅವಕಾಶವನ್ನು ನೀಡಲಾಗುತ್ತದೆ. ಸ್ತ್ರೀಶಕ್ತಿ ಸಂಘದವರು,ಧರ್ಮಸ್ಥಳ ಸಂಘದವರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ಕೊಟ್ಟರು.ಇದೇ ಸಂದರ್ಭದಲ್ಲಿ ಹೊಸ ಬೆಳವನೂರು ಗ್ರಾಮದ ಬಸವೇಶ್ವರ ಸಮುದಾಯ ಭವನದ ಅಧ್ಯಕ್ಷರಾದ ಮಹೇಂದ್ರಪ್ಪ, ಮುಖಂಡರುಗಳಾದ ಬಿ ಕೆ ವಿಶ್ವನಾಥ್, ರೇವಣಸಿದ್ದಪ್ಪ ಬಿ ಆರ್, ರಮೇಶ್ ಕೆಯು,ಬಿ ಆರ್ ಬಸವರಾಜ್, ಎ ಎನ್ ಬಸವರಾಜಪ್ಪ,ತಿಪ್ಪೇಸ್ವಾಮಿ ಕೆ ಎಸ್, ಎನ್ ವಿಜಯಕುಮಾರ್ ಬಿ ಜಿ ರವಿಕುಮಾರ್ ವಿ ಎಂ ರಾಮಚಂದ್ರಪ್ಪ, ಬಿ ಎಂ ನಾಗರಾಜಯ್ಯ, ಜಿ ಬಿ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಜೆ ಎಚ್ ಮಹಾಂತೇಶ್  ಮತ್ತು ಜೆ ಬಸವರಾಜಪ್ಪ, ಬಿ ವಿ ಶಿವಮೂರ್ತಿ, ಜಿ ಎಂ ಮಂಜಪ್ಪ  ಬಿ ಜೆ ಬಸವರಾಜಪ್ಪ ಮುಂತಾದವರು ಭಾಗವಹಿಸಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಸಮ್ಮೇಳನಕ್ಕೆ ನಮ್ಮೆಲ್ಲರ ಸಹಕಾರ ಸಹಭಾಗಿತ್ವ ಇರುತ್ತದೆ ಎಂದು  ತಿಳಿಸಿದರು.