
ಲಂಡನ್, ಜ.5- ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಬ್ರಿಟನ್ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ಅವರು ಭಾರತದ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ಪ್ರಭೇದದ ಕೊರೋನ ವೈರಸ್ ಕೈಮೀರಿ ಹೋಗುವ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಾದ್ಯಂತ ಹೊಸತಾಗಿ ಲಾಕ್ ಡೌನ್ ಘೋಷಿಸಿದ ಕೆಲವೇ ಹೊತ್ತಿನ ಬಳಿಕ ಜಾನ್ಸನ್ ಭಾರತ ಭೇಟಿಯನ್ನು ರದ್ದುಪಡಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಪ್ರಧಾನಮಂತ್ರಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, ಈ ತಿಂಗಳಾಂತ್ಯಕ್ಕೆ ಯೋಜನೆಯ ಪ್ರಕಾರ ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು ಎಂಬ ಡೌವ್ನಿಂಗ್ ಸ್ಟ್ರೀಟ್ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎಫ್ ಪಿ ವರದಿ ಮಾಡಿದೆ.
ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರು ಜಾನ್ಸನ್ ಗೆ ಇತ್ತೀಚೆಗೆ ನೀಡಿದ್ದ ಆಹ್ವಾನ ಸ್ವೀಕರಿಸಿದ್ದ ಜಾನ್ಸನ್ ಅವರು ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.