ಹೊಸ ಪಿಂಚಣಿ ಯೋಜನೆ ರದ್ದತಿಗೆ ಮನವಿ

ಸವದತ್ತಿ, ಅ 30- ರಾಜ್ಯದಲ್ಲಿ ಸುಮಾರು ಎರಡು ಲಕ್ಷಕಿಂತ ಅಧಿಕ ಸರಕಾರಿ ನೌಕರರು ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಿದ್ದು, ಈ ಯೋಜನೆಯಿಂದ ಇದುವರೆಗೂ ನಿವೃತ್ತಿಯಾದ ಹಾಗೂ ಮೃತಪಟ್ಟ ನೌಕರರಿಗೆ ಅರೆಕಾಸು ಮಾತ್ರ ತಲುಪಿದೆ. ನಿವೃತ್ತಿ ವೇತನ ಎಂಬುದು ನೌಕರನ ಸಂಧ್ಯಾ ಕಾಲದ ಹಕ್ಕಾಗಿದ್ದು, ಈ ಹೊಸ ಪಿಂಚಣಿ ಯೋಜನೆಯಿಂದಾಗಿ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರುವಂತೆ ಸವದತ್ತಿಯ ಎನ್.ಪಿ.ಎಸ್ ಸರಕಾರಿ ನೌಕರರು ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಹಾಗೂ ವಿಧಾನ ಪರಿಷತನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಇವರ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.
ಸವದತ್ತಿಯ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆಯ ಸಮಾರಂಭದಲ್ಲಿ ಮನವಿ ಮಾಡಿದ ನೌಕರರು, ಶೇ 10 ರಷ್ಟು ವೇತನವನ್ನು ಪ್ರತಿ ತಿಂಗಳು ನೌಕರನ ವೇತನದಲ್ಲಿ ಕಡಿತ ಮಾಡಲಾಗುತ್ತಿದ್ದು, ಅಷ್ಟೆ ಮೊತ್ತದ ಹಣವನ್ನು ಸರಕಾರದಿಂದ ಪ್ರತಿ ತಿಂಗಳು ಕ್ರೋಢಿಕರಿಸಿ ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಲಾಗುತ್ತಿದೆ. ಇಂದಿನ ಷೇರು ಮಾರುಕಟ್ಟೆಯ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು ಕನಿಷ್ಠ ಮಟ್ಟಕ್ಕೆ ಬಂದು ನಿಂತಿದೆ. ಇದರಿಂದ ನೌಕರನ ಖಾತೆಯಲ್ಲಿನ ಸಾವಿರಾರು ರುಪಾಯಿಗಳು ಕಡಿಮೆಯಾಗಿದ್ದು ನಿವೃತ್ತಿ ವೇತನ ಎಂಬುವುದು ಗಗನ ಕುಸುಮವಾಗಿದೆ. ಆದ್ದರಿಂದ ರಾಜ್ಯಾದ್ಯಂತ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರುವಂತೆ ಕೂಗು ಕೇಳಿ ಬರುತ್ತಿದೆ ಎಂಬುವ ಹಲವಾರು ವಿಚಾರಗಳನ್ನು ಉಪಮುಖ್ಯಮಂತ್ರಿಗಳೊಂದಿಗೆ ಎನ್.ಪಿ.ಎಸ್ ನೌಕರರು ಹಂಚಿಕೊಂಡರು.
ಈ ಸಂದರ್ಭದಲ್ಲಿ ನೌಕರರಾದ ಎನ್. ಎನ್. ಕಬ್ಬೂರ, ಸುಲೇಮಾನ ಗೋರಿನಾಯ್ಕ, ಅಶೋಕ ಮೊರೆ, ರಮೇಶ ಚಿಕ್ಕುಂಬಿ, ರವಿ ನಲವಡೆ, ಎಸ್. ಆರ್. ಡಬಕೆ, ಆರ್. ವಿ. ಸಿಂಗಾರಕೊಪ್ಪ ಇತರರು ಇದ್ದರು.