ಹೊಸ ಪಠ್ಯ ಕ್ರಮದಿಂದ ಶಿಕ್ಷಕರಲ್ಲಿ ಗೊಂದಲ: ಬರಗೂರು

ಕೊರಟಗೆರೆ, ಆ. ೬- ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಪಠ್ಯಕ್ರಮವಾದ ರಾಷ್ಟ್ರೀಯ ಶಿಕ್ಷಣ ಪದ್ದತಿಯಲ್ಲಿ ಗೊಂದಲ ಸೃಷ್ಠಿಯಾಗಿ ಯುವ ಜನತೆಗೆ ಸಮರ್ಪಕ ಬೋಧನೆ ಮಾಡಲಾಗದೆ ಶಿಕ್ಷಕರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಏರ್ಪಡಿಸಿದ್ದ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಭ್ರಮ-೨೦೨೨ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಪಠ್ಯ ಕ್ರಮದಿಂದ ತರಗತಿಗಳಲ್ಲಿ ಬೋಧನಾ ಕ್ರಮ ಸಮರ್ಪಕವಾಗಿ ನಿರ್ವಹಿಸದ ಪರಿಸ್ಥಿತಿ ಉಂಟಾಗಿದ್ದು ಇಂತಹ ಪರಿಸ್ಥಿತಿಗಳಲ್ಲಿ ಯುವ ಜನತೆ ಸಂ
ಸ್ಕೃತಿಗಳ ಜ್ಞಾನ, ಸಾಹಿತ್ಯದ ಜ್ಞಾನವಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ರೂಪುಗೊಳ್ಳಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೆಲ ಸ್ವಾರ್ಥಿಗಳು ತಮ್ಮ ಲಾಭಕ್ಕಾಗಿ ಜಾತಿ-ಜಾತಿಗಾಗಿ, ಧರ್ಮ-ಧರ್ಮಕ್ಕಾಗಿ ಸಂಘರ್ಷ ಸೃಷ್ಠಿಸುತ್ತಿದ್ದು ಸ್ವಾತಂತ್ರ್ಯ ಭಾರತ ಕಟ್ಟಿದ ಮಹನಿಯರಿಗೆ ಮಸಿ ಬಳಿಸುವ ಕೆಲಸ ಮಾಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಸ್ತುತ ಯುವಕರ ಪರಿಸ್ಥಿತಿ ಕಾಲಿಗೆ ಗುಂಡು, ಕೊರಳಿಗೆ ಬೆಂಡು ಕಟ್ಟಿ ನೀರಿನಲ್ಲಿ ಬಿಟ್ಟಿದ್ದು ಮುಳುಗಲಾರದೆ, ತೇಲಲಾರದ ಪರಿಸ್ಥಿತಿ ಉಂಟಾಗಿ ಯುವ ಜನತೆಯ ಮನಸ್ಸು ಒಡೆಯಲಾಗುತ್ತಿದೆ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಮನುಷ್ಯರನ್ನು ಒಂದು ಗೂಡಿಸುವ ಶಕ್ತಿಯಿದ್ದು ಯುವ ಜನತೆ ಸಾಹಿತ್ಯ, ಕಲೆ, ಸಂಸ್ಕೃತಿಯ ಜ್ಞಾನ ಬೆಳೆಸಿಕೊಂಡು ಇದರಿಂದ ಹೊರ ಬರಬೇಕಾಗಿದೆ. ವಿದ್ಯಾವಂತರೇ ಬುದ್ದಿವಂತರಲ್ಲ, ಅವಿದ್ಯಾವಂತರೂ ಅವಿವೇಕಿಗಳಲ್ಲ. ಗ್ರಾಮೀಣ ಭಾಗದ ಯುವಕರು ಅತ್ಮವಿಶ್ವಾಸದಿಂದ ಬೆಳೆಯಬೇಕು. ಗ್ರಾಮೀಣ ಭಾಗದಿಂದ ಬಂದ ಡಾ.ರಾಜ್‌ಕುಮಾರ್ ತಮ್ಮ ಪರಿಶ್ರಮದಿಂದ ಮೇಲೆ ಬಂದವರು ಅವರ ಆದರ್ಶ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಮಾತನಾಡಿ, ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ೪೦ ವರ್ಷಗಳ ಇತಿಹಾಸ ಹೊಂದಿದ್ದು ಕಾಲೇಜಿನಲ್ಲಿ ಅನೇಕ ವಿವಿಧ ವಿಭಾಗಗಳನ್ನು ಪ್ರಾರಂಭಿಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಯಲ್ಲಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ಕಾಲೇಜು ನ್ಯಾಕ್ ಸಂಸ್ಥೆಯಿಂದ ಬಿ ಶ್ರೇಣಿ ಪಡೆದಿದ್ದು ಶಾಸಕ ಡಾ.ಜಿ,ಪರಮೇಶ್ವರ್ ರವರು ಕಾಲೇಜಿನ ಅಭಿವೃದ್ದಿಗೆ ಹೆಚ್ಚಿನ ಕೊಡುಗೆ ನೀಡಿದ್ದು ಮುಂದಿನ ದಿನಗಳಲ್ಲಿ ಶಾಸಕರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಕಾಲೇಜು ಅಭಿವೃಧ್ದಿ ಸಮಿತಿ, ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಿಸಿಎ ಪದವಿ ತರಗತಿಯನ್ನು ಪ್ರಾರಂಭಿಸುವ ಭರವಸೆ ನೀಡದ ಅವರು, ಕಾಲೇಜು ನ್ಯಾಕ್ ಸಂಸ್ಥೆಯಿಂದ “ಎ” ಶ್ರೇಣಿ ಪಡೆಯುವುದಾಗಿ ಭರವಸೆ ನೀಡಿದ ಪ್ರಾಂಶುಪಾಲರು ಸಾಧನೆಗೆ ಬಡವ ಬಲ್ಲಿದ ಎಂಬ ಬೇದವಿಲ್ಲ.
ಗ್ರಾಮೀಣ ಭಾಗದಿಂದ ಬಂದ ಕಲೆ ಮತ್ತು ಸಾಂಸ್ಕೃತಿಕ ರಂಗದ ಸ್ಥಳೀಯ ಪ್ರತಿಭೆ ಕಂಬದರಂಗಯ್ಯ ಯುವಜನತೆಗೆ ಸ್ಪೂರ್ತಿಯಾಗಿದ್ದು ಕೊರಟಗೆರೆ ತಾಲ್ಲೂಕಿನ ಪ್ರತಿಭೆ ಎಂಬುದು ನಮ್ಮೆಲ್ಲರ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಉಪನ್ಯಾಸಕ ಡಾ.ಓ.ನಾಗರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕ ಹಾಗೂ ಉಪನ್ಯಾಸಕ ಡಾ.ಡಿ.ಶಿವನಂಜಯ್ಯ, ಉಪನ್ಯಾಸಕರುಗಳಾದ ಎಂ.ರಾಮಚಂದ್ರಪ್ಪ, ಶಿವಪ್ಪ, ಸಿಡಿಸಿ, ಸಮಿತಿ ಸದಸ್ಯೆ ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.