ಹೊಸ ಪಕ್ಷ ನಾನೇಕೆ ಕಟ್ಟಲಿ ಹೆಚ್‌ಡಿಕೆಗೆ ಸಿದ್ದು ತರಾಟೆ


ಬೆಂಗಳೂರು, ಡಿ. ೨೧- ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪುನರುಚ್ಛರಿಸಿದ್ದು, ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಿದೆ ಎಂದು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ರೈತರ ವಿರೋಧಿ ಕಾಯ್ದೆಗಳಿಗೆ, ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದೆ. ಇವೆಲ್ಲಾ ಜೆಡಿಎಸ್, ಬಿಜೆಪಿಯ ಬಿ ಟೀಂ ಎಂಬುದಕ್ಕೆ ರುಜುವಾತುಗಳು. ಇಷ್ಟಾದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಮ್ಮದು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ಧರಾಮಯ್ಯನವರಿಗೆ ತಾಕತ್ತಿದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ ಹತ್ತು ಸ್ಥಾನ ಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಅವರ ಸವಾಲಿಗೆ ಕಿಡಿಕಾರಿದ ಸಿದ್ಧರಾಮಯ್ಯ, ಕುಮಾರಸ್ವಾಮಿ ಹೇಳಿದ ಹಾಗೆ ನಾನ್ಯಾಕೆ ಕೇಳಬೇಕು. ನಾನ್ಯಾಕೆ ಹೊಸ ಪಾರ್ಟಿ ಕಟ್ಟಲಿ. ಹುಚ್ಚು ಹಿಡಿದಿದೆಯೇನ್ರಿ ನನಗೆ. ನಾನು ಕಾಂಗ್ರೆಸ್‌ನಲ್ಲಿ ಮುಂಚೂಣಿ ನಾಯಕ ಆರಾಮಾಗಿ ಇದ್ದೇನೆ. ನಾನ್ಯಾಕೆ ಹೊಸ ಪಕ್ಷ ಕಟ್ಟಲಿ ಎಂದರು.
ನಾಳೆ ಕುಮಾರಸ್ವಾಮಿ ಅವರು ಬಾವಿಗೆ ಬೀಳು ಅಂತಾರೆ ಬೀಳ್ಬೇಕಾ. ಅವರ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎಂದ ಅವರು, ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದರೋ ಅವರೆಲ್ಲಾ ಜೆಡಿಎಸ್‌ನಿಂದ ದೂರ ಆಗುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಬಿಜೆಪಿಯ ಬಿಟೀಂ ಎಂದಾಗ ಎಲ್ಲರೂ ನನ್ನ ಮೇಲೆ ಮುರುಕೊಂಡು ಬಿದ್ದದ್ದರು. ಹಿಂದೆ ನಾನು ಹೇಳಿದ್ದು ಸರಿಯಾಗಿದೆ ಎಂದರು.
ಬಾದಾಮಿಯಲ್ಲಿ ನನ್ನನ್ನು ಗೆಲ್ಲಿಸಿದ್ದು ಕುಮಾರಸ್ವಾಮಿ ಅಲ್ಲ ಕ್ಷೇತ್ರದ ಜನ ಎಂದು ತಿರುಗೇಟು ನೀಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಈ ಬಗ್ಗೆ ಪಕ್ಷದ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಬಿಜೆಪಿಯ ಸಿ.ಟಿ. ರವಿ ಹೇಳಿದ್ದಕ್ಕೆಲ್ಲಾ ಉತ್ತರಕೊಡಲು ಸಿ.ಟಿ. ರವಿ ಏನೂ ಪ್ರಶ್ನಾತೀತ ನಾಯಕನಾ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಬಿಜೆಪಿ ಜತೆ ವಿಲೀನದಿಂದ ಇಲ್ಲಿ ಏನೂ ಆಗಲ್ಲ. ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟವರು ವಿಲೀನದಿಂದ ದೂರವಾಗಲಿದ್ದಾರೆ. ಜೆಡಿಎಸ್ ಬಿಜೆಪಿಯ ಭೇಟಿ ಅದರ ಬಗ್ಗೆ ಇನ್ನು ಮುಂದೆ ಮಾತನಾಡೋಲ್ಲ. ಮುಂದೆ ಜೆಡಿಎಸ್ ಪಕ್ಷವೇ ಇರಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
ಬಿಜೆಪಿಯ ಅರವಿಂದ ಲಿಂಬಾವಳಿ ಪುಕ್ಕಲ. ಹಾಗಾಗಿ ಅವರು ಜೆಡಿಎಸ್ ಬಿಜೆಪಿಯಲ್ಲಿ ವಿಲೀನ ಆಗುತ್ತದೆ ಎಂದು ನೇರವಾಗಿ ಹೇಳಲು ಆಗಿಲ್ಲ. ವಿಲೀನದ ಬಗ್ಗೆ ನೇರವಾಗಿ ಹೇಳಲಿಲ್ಲ ಎಂದರೆ ಅದು ಪುಕ್ಕಲುತನವೆ ಯಾರು ಏನೇ ಹೇಳಿದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆ ಅಂತಿಮ. ಅವರ ವಿಲೀನ ಇಲ್ಲ ಎಂದಿದ್ದಾರೆ. ಅದೇ ಫೈನಲ್. ಹಾಗಾಗಿ ಯಡಿಯೂರಪ್ ಹೇಳಿಕೆ ತೆಗೆದುಕೊಂಡು ಲಿಂಬಾವಳಿ ಹೇಳಿಕೆ ಒಡೆದು ಹಾಕಿ ಂ ಎಂದು ಸಿದ್ಧರಾಮಯ್ಯ ಹಾಸ್ಯದ ದಾಟಿಯಲ್ಲಿ ಹೇಳಿದರು.
ಮುಂದಿನ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವ ವಿಚಾರ ಇಲ್ಲ. ಈಗ ಅದು ಅಪ್ರಸ್ತುತ ಎಂದು ಹೇಳಿದರು.
ಕಾಂಗ್ರಸ್‌ನ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಸೇರಲ್ಲ, ಕಾಂಗ್ರೆಸ್ ಬಿಡಲ್ಲ. ಇಬ್ರಾಹಿಂ ಮತ್ತು ನನ್ನದು ಹಳೆಯ ಸ್ನೇಹ. ಹಾಗಾಗಿ ಇಬ್ರಾಹಿಂ ನನ್ನ ಬಗ್ಗೆ ಮಾತನಾಡುತ್ತಾರೆ ಮಾತನಾಡಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದವರನ್ನು ಸಮಯ ಬಂದಾಗ ನೇಮಕ ಮಾಡುತ್ತೇವೆ. ಗುಲಾಬ್ ನಬೀ ಆಜಾದ್, ಅಹಮದ್ ಪಟೇಲ್ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನದಲ್ಲಿ ಇರಲಿಲ್ಲವೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ರಾಜಕಾರಣ ನಿಂತ ನೀರಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕೊಡವ ಸಮುದಾಯದವರು ಡೀಫ್ ತಿನ್ನುತ್ತಾರೆ ಎಂದು ನಾನು ಅಗೌರವವಾಗಿ ಮಾತನಾಡಿಲ್ಲ. ಆದರೂ ಆ ಸಮುದಾಯಕ್ಕೆ ಬೇಸರ ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಮತ್ತೆ ಮತ್ತೆ ಇದನ್ನು ಕೆದಕುವುದು ಸರಿಯಲ್ಲ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಕೆದಕುವುದನ್ನೇ ಚಾಳಿ ಮಾಡಿಕೊಂಡಿದ ಎಂದು ಟೀಕಿಸಿದರು.
ಖಾಸಗಿ ಶಾಲೆಗಳು ಮತ್ತು ಪೋಷಕರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಒಂದು ವರ್ಷ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಿ ಎಂದು ಒತ್ತಾಯ ಮಾಡಿದ್ದೆ. ನಿನ್ನೆ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಅವರು, ಖಾಸಗಿ ಶಾಲೆಗಳ ಜತೆ ಸರ್ಕಾರ ಶಾಮೀಲಾಗಿದೆ ಎಂಬ ಹೇಳಿಕೆಯನ್ನು ಪುನರುಚ್ಛರಿಸಿದರು.