ಹೊಸ ಪಕ್ಷ ಘೋಷಣೆಗೆ ಸಜ್ಜಾದ ಗುಲಾಂ

ನವದೆಹಲಿ,ಸೆ.೪- ಕಾಂಗ್ರೆಸ್ ಪಕ್ಷದಲ್ಲಿ ಐದು ದಶಕಗಳ ಕಾಲದ ಸುಧೀರ್ಘ ಒಡನಾಟಕ್ಕೆ ಇತ್ತಿಚೆಗಷ್ಟೇ ಎಳ್ಳುನೀರು ಬಿಟ್ಟಿದ್ದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಹೊಸ ಪಕ್ಷ ಘೋಷಣೆ ಮಾಡುವ ನಿರೀಕ್ಷೆ ಇದೆ.
ರಾಹುಲ್ ಗಾಂಧಿ ಅವರ ವಿರುದ್ದ ವಾಗ್ದಾಳಿ ನಡೆಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಅಜಾದ್ ಅವರು ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷ ಸ್ಥಾಪಿಸಿ ಬಿಜೆಪಿ, ಅಥವಾ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ತವರು ರಾಜ್ಯ ಜಮ್ಮುವಿನಲ್ಲಿ ದೊಡ್ಡ ಮಟ್ಟದ ರ್‍ಯಾಲಿ ನಡೆಸಿ ಅಲ್ಲಿ ನೂತನ ಪಕ್ಷವನ್ನು ಪ್ರಕಟಿಸಲು ಮುಂದಾಗಿದ್ದು ಅನೇಕ ಬೆಂಬಲಿಗರು ಸಾಥ್ ನೀಡುವ ಸಾಧ್ಯತೆ ಇದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅಜಾದ್, ಶೀಘ್ರದಲ್ಲೇ ಹೊಸ ಪಕ್ಷ ಪ್ರಾರಂಭಿಸುವುದಾಗಿ ಹೇಳಿದ್ದು. ಶೀಘ್ರದಲ್ಲಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಲಿದ್ಧಾರೆ.
ಆಜಾದ್ ನೇತೃತ್ವದ ನೂತನ ಪಕ್ಷ ಬಿಜೆಪಿ ಅಥವಾ ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಅಥವಾ ಪಿಡಿಪಿಯೊಂದಿಗೆ ಮೈತ್ರಿ
ಮಾಡಿಕೊಳ್ಳುವ ಆಯ್ಕೆ ಮುಕ್ತವಾ ಗಿರಿಸಿಕೊಂಡಿದೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಕೊಳ್ಳುವ ಪ್ರಶ್ನೆಯೇ ಇಲ್ಲ. ಇದರಿಂದ ಅವರಿಗೂ ಪ್ರಯೋಜನವಾಗುವುದಿಲ್ಲ, ನನಗೂ ಆಗುವುದಿಲ್ಲ ಎಂದು ಅಜಾದ್ ಹೇಳಿದ್ದರು. ಆದರೂ ಪ್ರಧಾನಿ ಸೇರಿದಂತೆ ಬಿಜೆಪಿ ಉನ್ನತ ನಾಯಕರೊಂದಿಗೆ ಹೊಂದಿರುವ ಉತ್ತಮ ಸಂಬಂಧದಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ಅಲ್ಲಗಳೆಯುವಂತಿಲ್ಲ.
೨೦೨೪ ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಕ್ಷದ ಮಾಜಿ ಪಂಜಾಬ್ ಮುಖ್ಯಸ್ಥ ಸುನಿಲ್ ಜಾಖರ್ ಮತ್ತು ಮಾಜಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್, ಅಲ್ಲದೆ ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿದ್ದಾರೆ.