ಹೊಸ ನ್ಯಾಯವಾದಿಗಳಿಗೆ 5 ವರ್ಷ ಮಾಸಿಕ 10,000ರೂ.ಗಳ ಗೌರವಧನ ನೀಡಲು ರಾಜೇಶ್ವರ್ ಆಗ್ರಹ

ಕಲಬುರಗಿ,ಮಾ.4:ಹೊಸದಾಗಿ ನ್ಯಾಯವಾದಿ ವೃತ್ತಿಗೆ ಸೇರಿದವರಿಗೆ ಕಡ್ಡಾಯವಾಗಿ ಐದು ವರ್ಷಗಳ ಕಾಲ ಪ್ರತಿ ತಿಂಗಳು 10,000ರೂ.ಗಳ ಗೌರವಧನ ನೀಡಬೇಕು ಎಂದು ಭಾರತೀಯ ವಕೀಲರ ಸಮಿತಿಯ ಜಿಲ್ಲಾ ಸಂಚಾಲಕರು ಹಾಗೂ ನ್ಯಾಯವಾದಿಗಳಾದ ರಾಜಶೇಖರ್ ಬಿ. ರಾಜೇಶ್ವರ್ ಡೊಂಗರಗಾಂವ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ನ್ಯಾಯವಾದಿಗಳ ರಕ್ಷಣೆಗೆ ಕಾನೂನು ಹಾಗೂ 100 ಕೋಟಿ ರೂ.ಗಳ ವಿಮಾ ಯೋಜನೆ ಜಾರಿಗೆ ಮಾಡಿದ್ದು ಅಭಿನಂದನಾರ್ಹ ಎಂದರು.
ಪ್ರಸ್ತುತ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ನ್ಯಾಯವಾದಿಗಳ ಕಲ್ಯಾಣಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಪ್ರತಿ ಗ್ರಾಮ ಪಂಚಾಯಿತಿಗೆ ಐವರು ನ್ಯಾಯವಾದಿಗಳನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸುವಂತೆ, ಪುರಸಭೆ, ನಗರಸಭೆ ಪ್ರತಿ ವಾರ್ಡ್‍ಗಳಿಗೂ ಸಹ ಐವರು ನ್ಯಾಯವಾದಿಗಳನ್ನು ಸಲಹೆಗಾರರನ್ನಾಗಿ ನೇಮಿಸುವಂತೆ ಆಗ್ರಹಿಸಿದರು.
ವಕೀಲರ ಕುಟುಂಬ ವಿಮಾ ಯೋಜನೆ (ವಕೀಲರ ಕಾಲೋನಿ) ಜಿಡಿಎ ಗೃಹ ಮಂಡಳಿ ನಿವೇಶನಗಳನ್ನು ಮೀಸಲಿಡುವಂತೆ, ವಕೀಲರು ಅಕಾಲಿಕ ಮರಣ ಹೊಂದಿದಲ್ಲಿ ಅವರಿಗೆ 25 ಲಕ್ಷ ರೂ.ಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಜೆಟ್‍ನಲ್ಲಿ ಮೀಸಲಿಡುವಂತೆ, ಎಂವಿಸಿ ಹೊಸ ಕಾನೂನು ತಿದ್ದುಪಡಿಯನ್ನು ಕೈಬಿಡುವಂತೆ, ವಕೀಲರ ಅಕ್ಯಾಡೆಮಿ ಮತ್ತು ಭವನಗಳನ್ನು ಇತ್ಯಾದಿ ಯೋಜನೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯದ ಸುಮಾರು 1.25 ಲಕ್ಷ ನ್ಯಾಯವಾದಿಗಳ ಕುರಿತು ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಬಳೇಶ್ವರ್ ಮಲಕಪ್ಪಗೋಳ್, ಸಂಗೀತಾ ಸ್ವಾಮಿ, ರಾಜೇಶ್ವರಿ, ಸಂಗಮೇಶ್ ದೊಡ್ಡಮನಿ, ಮಲ್ಲಿನಾಥ್ ಬಾಳಿ, ಶಿವಶರಣಪ್ಪ ಮುನ್ನಳ್ಳಿ, ಶ್ರೀದೇವಿ, ನಾಗೇಂದ್ರಪ್ಪ ಕುದನೂರ್ ಮುಂತಾದವರು ಉಪಸ್ಥಿತರಿದ್ದರು.