
ತಿರುಪತಿ, ಮಾ. ೧೫- ಆಧುನಿಕ ತಂತ್ರಜ್ಞಾನದ ಹಿನ್ನಲೆಯಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತಾಧಿಗಳಿಗೆ ಸೌಲಭ್ಯಗಳು ಬಹುಬೇಗ ಕೈಸೇರುವ ಜೊತೆಗೆ ತಿಮ್ಮಪ್ಪನಿಗೂ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ.
ನೂತನ ತಂತ್ರಜ್ಞಾನ ಪರಿಚಯದ ಹಿನ್ನಲೆಯಲ್ಲಿ ಐದರಿಂದ ಹತ್ತು ನಿಮಿಷಗಳಲ್ಲಿ ಭಕ್ತಾದಿಗಳಿಗೆ ರೂಮ್ ದೊರೆಯುತ್ತಿರುವ ಕುರಿತು ತಿರುಮಲ ಆಡಳಿತ ಮಂಡಳಿಯ ಧರ್ಮಾ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಈ ತಂತ್ರಜ್ಞಾನದಿಂದ ಭಕ್ತಾದಿಗಳು ಕೊಠಡಿ ಪಡೆಯಲು ಕಾಯುವ ಸಮಯವೂ ಕಡಿಮೆಯಾಗಿ ಅನುಕೂಲವಾಗಿದೆ.
ಇತ್ತೀಚಿಗಷ್ಟೇ ಟಿಟಿಡಿ ತಿರುಮಲದಲ್ಲಿ ಆರಂಭಿಸಿದ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಭಕ್ತಾದಿಗಳಿಗೆ ಈ ಸೌಕರ್ಯ ದೊರೆಯುತ್ತಿದೆ. ಫೇಸ್ ರೆಕಗ್ನೈಸೇಷನ್ ಸಿಸ್ಟಮ್ ಮೂಲಕ ಟಿಟಿಡಿ ಹೊಸ ಸೌಕರ್ಯವನ್ನು ಒದಗಿಸಿದೆ.
ಮಾರ್ಚ್ ೧ ರಿಂದ ರೂಮ್ ಹಂಚಿಕೆಯಿಂದ ರೂ.೨.೯೫ ಕೋಟಿ ಆದಾಯ ಹರಿದು ಬಂದಿದೆ ಎಂದು ಧರ್ಮಾ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಆಧಾರ್ ಕಾರ್ಡ್ ಆಧಾರದ ಮೇಲೆ ಕೊಠಡಿಗಳನ್ನು ಪಡೆದ ಭಕ್ತರಿಗೆ ೩೦ ದಿನಗಳ ನಂತರ ಮತ್ತೆ ಕೊಠಡಿಗಳನ್ನು ಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಉಚಿತ ಲಡ್ಡು ವಿತರಣೆಯಲ್ಲೂ ಅಕ್ರಮ ನಡೆಯುತ್ತಿರುವುದನ್ನು ಮಾರ್ಚ್ ತಿಂಗಳ ನಂತರ ಫೇಸ್ ರೆಕಗ್ನೈಸೇಷನ್ ಸಿಸ್ಟಮ್ ಮೂಲಕ ತಡೆಗಟ್ಟಲಾಗಿದೆ. ಈವರೆಗೆ ತಿರುಮಲದಲ್ಲಿ ಲಡ್ಡು ಪ್ರಸಾದ, ಸರ್ವ ದರ್ಶನಂ ಟೋಕನ್ ವಿತರಣೆಯಿಂದ ಹಿಡಿದು ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವವರೆಗೂ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು. ಆದರೆ ಈ ಎಲ್ಲ ಅಕ್ರಮಗಳಿಗೆ ಮಂಗಳ ಹಾಡಲು ಟಿಟಿಡಿ ಆಧುನಿಕ ವ್ಯವಸ್ಥೆಯ ಮೊರೆ ಹೋಗಿದೆ.
ಸದ್ಯ ತಿರುಮಲದಲ್ಲಿ ಸುಮಾರು ೭,೦೦೦ ವಸತಿಗೃಹಗಳಿವೆ. ಅವುಗಳಲ್ಲಿ ಸುಮಾರು ೫,೦೦೦ ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ಉಳಿದ ೧,೦೦೦ ರೂಮ್‌ಗಳನ್ನು ವಿಐಪಿ ಭಕ್ತರಿಗೆ ಮೀಸಲಿಡಲಾಗಿದೆ. ಮಧ್ಯವರ್ತಿಗಳು ತಡೆಯಲು ಟಿಟಿಡಿ ಡಿಜಿಟಲ್ ಪಾವತಿ, ಒಟಿಪಿ ಮತ್ತು ಫೇಸ್ ರೆಕಗ್ನೈಸೇಷನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.