ಹೊಸ ತಂತ್ರಜ್ಞಾನದಿಂದ ಕಟ್ಟಕಡೆಯ ವ್ಯಕ್ತಿ ಬದುಕು ಸುಧಾರಣೆ; ಸಿಎಂ ಆಶಯ

ಬೆಂಗಳೂರು,ನ.೧೭- ಹೊಸ ಹೊಸ ಆವಿಷ್ಕಾರ, ತಂತ್ರಜ್ಞಾನಗಳಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನು ಸುಧಾರಿಸಿ ಆತ ಉನ್ನತ ಮಟ್ಟದ ಸೌಲಭ್ಯಗಳೊಂದಿಗೆ ಉತ್ತಮ ಜೀವನ ನಡೆಸುವಂತಾಗಬೇಕು ಎಂಬುದು ತಮ್ಮ ಸರ್ಕಾರದ ಆದ್ಯತೆ, ಆಶಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರ ಭವಿಷ್ಯವೂ ಉಜ್ವಲವಾಗಬೇಕು, ಆ ನಿಟ್ಟಿನಲ್ಲಿ ತಂತ್ರಜ್ಞಾನ, ಆವಿಷ್ಕಾರಗಳು ಸಮಾಜಿದ ಕಟ್ಟ ಕಡೆಯ ವ್ಯಕ್ತಿ, ಬಡವರು, ಶ್ರೀಸಾಮಾನ್ಯನ ಬದುಕನ್ನು ಸುಧಾರಿಸುವಂತಾಗಬೇಕು. ಆತನೂ ಎಲ್ಲರಂತೆ ಉನ್ನತ ಮಟ್ಟದ ಬದುಕನ್ನು ಕಟ್ಟಿಕೊಳ್ಳಬೇಕು. ಶಿಕ್ಷಣ, ಉದ್ಯೋಗ,ಕೌಶಲ್ಯಗಳು ಕಟ್ಟಕಡೆಯ ವ್ಯಕ್ತಿಯ ಜೀವನವಾದಾಗ ಎಲ್ಲರ ಭವಿಷ್ಯವೂ ಉಜ್ವಲವಾದಂತೆ ಎಂದರು.
ಹೊಸ ಹೊಸ ಆವಿಷ್ಕಾರಗಳು ಕೇವಲ ಆವಿಷ್ಕಾರಗಳನ್ನು ಮಾಡುವವರ ಭವಿಷ್ಯ ಉಜ್ವಲವಾಗುವಂತೆ ಮಾಡುವ ಜತೆಗೆ ಎಲ್ಲರ ಜೀವನ,ಭವಿಷ್ಯ ಉಜ್ವಲವಾಗುವಂತಹ ಆವಿಷ್ಕಾರಗಳಾದಾಗ ಎಲ್ಲವೂ ಸರಿ ದಾರಿಯಲ್ಲಿ ಸಾಗುತ್ತದೆ ಎಂದರು.
ಹೊಸ ಹೊಸ ಆವಿಷ್ಕಾರಗಳು ತಂತ್ರಜ್ಞಾನಗಳು ಹೊಸ ಮನುಕುಲ, ಹೊಸ iನುಷ್ಯತ್ವ, ಹೊಸ ಶೆಖೆ ಉದಯಕ್ಕೆ ಕಾರಣವಾಗಬೇಕು. ಹಾಗೆಯೇ ಇವುಗಳಿಂದ ಎಲ್ಲರಿಗೂ ಸಮಾನ ಅವಕಾಶಗಳು ದೊರೆತು ಅತ್ಯುತ್ತಮ ಪ್ರತಿಭೆಗಳು ಪ್ರಜ್ವಲಿಸಿದಾಗ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಕ್ಕೆ ಒಂದು ಮೌಲ್ಯ ಸಿಗುತ್ತದೆ ಎಂದರು.
ಕರ್ನಾಟಕ ಅದರಲ್ಲೂ ಬೆಂಗಳೂರು ಆವಿಷ್ಕಾರಗಳ ನಗರ, ನವಕರ್ನಾಟಕ ನಿರ್ಮಾಣದಿಂದ ನವ ಭಾರತ ನಿರ್ಮಾಣ ಸಾಧ್ಯ, ಮೇಕ್ ಇನ್ ಕರ್ನಾಟಕದ ಮೂಲಕ ಮೇಕ್ ಇನ್ ಇಂಡಿಯಾವೂ ಸಾಧ್ಯವಾಗುತ್ತದೆ ಎಂದರು.
ಪ್ರಧಾನಿ ನರೇಂದ್ರಮೋದಿ ಅವರ ಆತ್ಮನಿರ್ಭರ್ ಭಾರತ ನಿರ್ಮಾಣದ ಸ್ಫೂರ್ತಿಯನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ನಮ್ಮ ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ತೊಡಗಿಕೊಳ್ಳಬೇಕು. ಹಾಗಾದಾಗ ಮಾತ್ರ ನವಭಾರತ ನಿರ್ಮಾಣದ ಪ್ರಧಾನಿಗಳು ಕನಸು ಸಾಧ್ಯವಾಗುತ್ತದೆ ಎಂದರು.
ಹಂಸ ನಗರ ಬೆಂಗಳೂರು
ಬೆಂಗಳೂರು ಸರಸ್ವತಿಯ ನಗರ, ಸರಸ್ವತಿಯ ವಾಹನ ಹಂಸ, ಹಂಸ ಬಹಳ ದೊಡ್ಡ ಪಕ್ಷಿ. ಅದು ಬಹಳ ಎತ್ತರಕ್ಕೆ ಹಾರುತ್ತದೆ. ಮಾನಸ ಸರೋವರದಲ್ಲಿ ಹಂಸಗಳು ಕಾಣ ಸಿಗುತ್ತವೆ. ಅಲ್ಲಿ ರಣ ಹದ್ದುಗಳಿಲ್ಲ. ಅದೇ ರೀತಿ ಬೆಂಗಳೂರು ತಂತ್ರಜ್ಞಾನ, ಆವಿಷ್ಕಾರದಲ್ಲಿ ಹಂಸದ ರೀತಿ ಮಾನಸ ಸರೋವರದ ಎತ್ತರಕ್ಕೆ ಹಾರಿ ಜಗತ್ತಿನ ಅತೀ ದೊಡ್ಡ ಸೃಷ್ಟಿಕರ್ತ ಶಿವನ ನೆಲಬೀಡಾದ ಮಾನಸ ಸರೋವರದ ಎತ್ತರಕ್ಕೂ ಕೀರ್ತಿ ತಲುಪಿ ಶಿವನ ಆರ್ಶೀವಾದ ಎಲ್ಲರಿಗೂ ಸಿಗುವಂತಾಗಲಿ ಎಂದು ಹೇಳಿದರು.
ಕರ್ನಾಟಕ ಭವಿಷ್ಯದ ನಗರವಾಗಿದೆ, ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ತಮಗೆ ಭವಿಷ್ಯದ ಬಾಹ್ಯಾಕಾಶ ನೌಕೆಯಲ್ಲಿ ಕುಳಿತ ಅನುಭವವಾಗುತ್ತಿದೆ. ಬೆಂಗಳೂರು ಹೊಸ ಯೋಚನೆಗಳ ಮಿದುಳು ಇದ್ದ ಹಾಗೆ ಎಂದರು.
ಜಗತ್ತಿನ ಎಲ್ಲ ಸಾಧಕರನ್ನು ಬೆಂಗಳೂರಿನಲ್ಲಿ ಹೊಸ ಹೊಸ ಆವಿಷ್ಕಾರ, ಪ್ರಯೋಗಗಳನ್ನು ಮಾಡಲು ಸ್ವಾಗತಿಸುತ್ತೇನೆ. ಇಲ್ಲಿ ಅತ್ಯುತ್ತಮ ತಂತ್ರಜ್ಞಾನ, ಉದ್ಯಮ ಸ್ನೇಹಿ ವಾತಾವರಣವಿದೆ. ಇಲ್ಲಿನ ಕಾಯ್ದೆ ನೀತಿಗಳು ಇದಕ್ಕೆ ಎಲ್ಲ ಪೂರಕವಾಗಿವೆ ಎಂದು ಅವರು ಹೇಳಿದರು.
ಕರ್ನಾಟಕ ತಂತ್ರಜ್ಞಾನದ ನಾಯಕ, ನಮ್ಮಲ್ಲಿ ನಾಯಕತ್ವ ವಹಿಸುವ ಉದ್ಯಮಿಗಳಿದ್ದಾರೆ, ಸಾಧಕರಿದ್ದಾರೆ. ಪ್ರತಿಯೊಂದು ತಂತ್ರಜ್ಞಾನದ ವಲಯಗಳಿಗೆ ವಿಷನ್ ಗ್ರೂಪ್ ಕಾರ್ಯತಂತ್ರದಲ್ಲಿ ಹೊಂದಿದ್ದೇವೆ. ಇದೆಲ್ಲದರ ಜತೆಗೆ ಅತ್ಯುತ್ತಮ ಮಾನವ ಸಂಪನ್ಮೂಲವು ರಾಜ್ಯದಲ್ಲಿದೆ ಎಂದರು.
ರಾಜ್ಯದ ತಂತ್ರಜ್ಞಾನ ನೀತಿಗಳು ದೂರದೃಷ್ಟಿ ಉಳ್ಳದ್ದಾಗಿದೆ. ಈಗಾಗಲೇ ತಂತ್ರಜ್ಞಾನ ವಲಯದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಭವಿಷ್ಯದಲ್ಲೂ ಬದಲಾವಣೆಯಾಗುತ್ತದೆ. ಕರ್ನಾಟಕ ಅವಕಾಶಗಳ ಅಗರ ಎಂದರು.
ಕರ್ನಾಟಕದಿಂದ ಎಷ್ಟು ರಫ್ತಾಗುತ್ತದೆ. ಕರ್ನಾಟಕದಲ್ಲಿ ಎಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗುತ್ತಿದೆ ಎಂಬುದರ ವಿವರಗಳನ್ನು ಹೇಳುವ ಅಗತ್ಯವಿಲ್ಲ. ಕಳೆದ ಒಂದು ವರ್ಷದಲ್ಲಿ ದೇಶದ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲ್ಲಿ ಶೇ. ೪೮ ರಷ್ಟು ಹೂಡಿಕೆ ಕರ್ನಾಟಕದಲ್ಲಾಗಿದೆ ಎಂದರು.

ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಉತ್ತೇಜನ ನೀಡಲು ಸದ್ಯದಲ್ಲೇ ಸಂಶೋಧನಾ ಮತ್ತು ಅಭಿವೃದ್ಧಿ ಹೊಸ ನೀತಿಯನ್ನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೇವೆ. ಈಗಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಹೆಚ್ಚು ಬಲ ತುಂಬುವ ಹೊಸ ಹೊಸ ಸಂಶೋಧನಾ ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೂ ಆದ್ಯತೆ ನೀಡಲಾಗಿದೆ ಎಂದರು.