ಹೊಸ ಜೀವನದತ್ತ ರಾಜ್ಯ

ಬೆಂಗಳೂರು, ಆ. ೨- ನಗರದಲ್ಲಿ ವ್ಯಾಪಕವಾಗಿ ಹರುಡುತ್ತಿರುವ ಕೊರೊನಾ ಸೋಂಕು ಹರಡುವುದನ್ನು ತಡೆಯಲು 2 ತಿಂಗಳಿನಿಂದ ಪ್ರತಿ ಭಾನುವಾರ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಲಾಗಿದ್ದು ಹಾಗೂ ರಾಜ್ಯಾದ್ಯಂತ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ ತೆರವುಗೊಂಡಿದ್ದು, ಬೆಂಗಳೂರು ಸೇರಿದಂತೆ ಜನಜೀವನ ಇಂದು ಸಹಜಸ್ಥಿತಿಗೆ ಮರಳಿದೆ..
ಅನ್‌ಲಾಕ್ 3 ಪ್ರಕ್ರಿಯೆಯ ಭಾಗವಾಗಿ ಲಾಕ್‌ಡೌನ್ ತೆರವು ಮಾಡಲಾಗಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಓಲಾ ಕ್ಯಾಬ್, ಆಟೋಗಳ ವಾಹನ ಸಂಚಾರ ಆರಂಭವಾಗಿದ್ದು, ವಾಣಿಜ್ಯ ವಹಿವಾಟುಗಳು ಸಹಜಸ್ಥಿತಿಗೆ ಮರಳಿವೆ.
ಲಾಲ್‌ಭಾಗ್-ಕಬ್ಬನ್‌ಪರ್ಕ್‌ಗಳಲ್ಲಿ ಜನರು ವಾಯು ವಿಹಾರಕ್ಕೆ ಆಗಮಿಸಿದ ದೃಶ್ಯಕಂಡು ಬಂದಿತ್ತು. ಭಾನುವಾರ ಲಾಕ್‌ಡೌನ್ ಮಾಡುತ್ತಿದ್ದ ಕಾರಣ ಪಾರ್ಕ್‌ಗಳು ಬಂದ್ ಮಾಡಲಾಗಿತ್ತು. ಈಗ ಭಾನುವಾರ ಲಾಕ್‌ಡೌನ್ ತೆರವಾಗಿರುವುದರಿಂದ ಅತ್ಯಂತ ಉತ್ಸಾಹದಿಂದ ಜನರು ವಾಯುವಿಹಾರ ನಡೆಸಿದರು.
ನಗರದ ಎಲ್ಲ ಮಾರ್ಗಗಳಲ್ಲೂ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಬೆಳಿಗ್ಗೆ 5 ಗಂಟೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ಹೊರಗೆ ಆಟೊ ಹಾಗೂ ಕ್ಯಾಬ್ ಸಂಚಾರ ಆರಂಭವಾಗಿದೆಯಾದರೂ ಜನರು ಮಾತ್ರ ಕೊರೊನಾ ಭೀತಿಯಿಂದಾಗಿ ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.
ಭಾನುವಾರವಾಗಿರುವುದರಿಂದ ಕಚೇರಿಗಳಿಗೆ ರಜೆ ಇರುವುದರಿಂದ ಜನರು ಬಿಎಂಟಿಸಿ ಬಸ್ ನಿಲ್ದಾಣದತ್ತ ಸುಳಿಯುತ್ತಿಲ್ಲ.
ಪ್ರಯಾಣಿಕರ ಕೊರತೆಯಿಂದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಸಂಚಾರ ವಿರಳವಾಗಿದೆ. ಫ್ಲಾಟ್‌ಫಾಂಗಳು ಖಾಲಿಯಾಗಿದ್ದು, ಹೀಗಾಗಿ ಎಲ್ಲ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಸಂಚರಿಸುತ್ತಿರುವುದು ಕಂಡು ಬಂದಿದೆ.
ದ್ವಿಚಕ್ರ ವಾಹನ ಸವಾರರು ಯಾವುದೇ ಆತಂಕವಿಲ್ಲದೆ ನಿರಾತಂಕವಾಗಿ ಸಂಚರಿಸುತ್ತಿದ್ದಾರೆ.
ಅನ್‌ಲಾಕ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದ್ದು, ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲೂ ರಾಜ್ಯ ಲಾಕ್‌ಡೌನ್ ಇರುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ನಗರದಲ್ಲಿ ವ್ಯಾಪಾರ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದ್ದು, ಅಂಗಡಿ-ಮುಂಗಟ್ಟು, ಹೋಟೆಲ್, ಮಾಲ್‌ಗಳು ತೆರೆಯಲಾಗಿದೆ. ಎಂದಿನಂತೆ ಜನರು ಮನೆಯಿಂದ ಹೊರ ಬಂದು ತಮಗೆ ಅಗತ್ಯವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
ರಾತ್ರಿ ವೇಳೆ ವಿಧಿಸಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದ್ದು, ಇಂದಿನಿಂದ ರಾತ್ರಿ ಕೂಡ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಭಾನುವಾರ ಲಾಕ್‌ಡೌನ್ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಬಸ್ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ 4 ಸಾವಿರ ಬಸ್‌ಗಳು ಸಂಚರಿಸುತ್ತಿವೆ. ಇದರ ಜತೆಗೆ ಆಂಧ್ರಪ್ರದೇಶಕ್ಕೂ ಬಸ್ ಸೇವೆ ಒದಗಿಸಲಾಗಿದೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬೀದರ್, ಕಲಬುರ್ಗಿ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯಾದ್ಯಂದ ಬಸ್ ಸಂಚರಿಸಲಿದೆ.
ರಾತ್ರಿ ಕರ್ಫ್ಯೂ ತೆರವುಗೊಳಿಸಿರುವುದರಿಂದ ರಾಜ್ಯಾದ್ಯಂತ ಜನಜೀವನ ಮಾಮೂಲು ಸ್ಥಿತಿಗೆ ಮರಳಿದೆ. ಕೊರೊನಾ ಸೋಂಕಿನ ನಡುವೆಯೂ ಬದುಕು ಕಟ್ಟಿಕೊಳ್ಳಲು ಜನರು ನಿಧಾನವಾಗಿ ಸಜ್ಜಾಗುತ್ತಿದ್ದಾರೆ.
ಬೆಂಗಳೂರು ಮತ್ತು ರಾಜ್ಯದಲ್ಲಿ ಸೋಂಕಿನ ಪ್ರಮಾಣ ವ್ಯಾಪಕವಾಗಿ ಹರಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅನ್‌ಲಾಕ್ 3 ಜಾರಿಗೆ ಬಂದಿರುವುದರಿಂದ ರಾತ್ರಿ ವೇಳೆ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ. ಆರ್ಥಿಕ ಚಟುವಟಿಕೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಆ. 5 ರಿಂದ ಯೋಗ, ಜಿಮ್‌ಗಳಿಗೆ ಆರಂಭಿಸಲು ಅನುಮತಿ ನೀಡಲಾಗಿದೆ.ಆದರೆ, ಮೆಟ್ರೊ ರೈಲು ಸಂಚಾರ, ಬಾರ್ ಮತ್ತು ರೆಸ್ಟೊರೆಂಟ್, ಚಲನಚಿತ್ರ ಮಂದಿರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿಲ್ಲ.