ಹೊಸ ಕೈಗಾರಿಕಾ ಪ್ರದೇಶ ವಸಾಹತು ಸ್ಥಾಪನೆ ಪ್ರಕ್ರಿಯೆ ಚುರುಕುಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ

ಬೀದರ ನ.20:ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶಿಸಿದಂತೆ, ಹಿಂದುಳಿದ ಔರಾದ್ ತಾಲೂಕಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಮತ್ತು ವಸಾಹತು ಸ್ಥಾಪನೆ ಮಾಡುವ ಪ್ರಕ್ರಿಯೆಯನ್ನು ತೀವ್ರವಾಗಿ ನಡೆಸಬೇಕು. ಜಮೀನು ಗುರುತಿಸಿ, ಸರ್ವೆ ಮಾಡುವ ಕಾರ್ಯವನ್ನು ಮುಂದಿನ ಸಭೆಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಕರ್ನಾಟಕ ಕೈಗಾರಿಕಾಭಿವೃದ್ಧಿ ಪ್ರದೇಶ ಮಂಡಳಿ (ಕೆಐಎಡಿಬಿ) ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‍ಎಸ್‍ಐಡಿಸಿ) ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವೆಂಬರ್ 19ರಂದು ನಡೆದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಮಟ್ಟದಲ್ಲಿ ಕೈಗಾರಿಕಾ ಸ್ಥಾಪನೆಗೆ ಐದು ಘಟಕಗಳು ಮುಂದೆ ಬಂದಿದ್ದು, 2554.75 ಲಕ್ಷ ರೂ. ಬಂಡವಾಳ ಮತು 103 ಜನರಿಗೆ ಉದ್ಯೋಗ ನೀಡುವ ಅವಕಾಶವಿರುತ್ತದೆ ಎಂದು ಇದೆ ವೇಳೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸುರೇಖಾ ಮುನವಳ್ಳಿ ಅವರು ಸಭೆಗೆ ತಿಳಿಸಿದರು. ಈ ಘಟಕಗಳಿಗೆ ಬ್ಯಾಂಕಿನಿಂದ ಸಾಲ, 109 ಕಾಯಿದೆ ಅಡಿ ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ ಮತ್ತು ಇತರೆ ಇಲಾಖೆಗಳ ಪರವಾನಿಗೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಖಾಲಿ ಇರುವ ನಿವೇಶನಗಳ ಬಗ್ಗೆ ಚರ್ಚಿಸಲಾಯಿತು. ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನಗಳ ಲಭ್ಯತೆ ಬಗ್ಗೆ ವರದಿ ಸಲ್ಲಿಸಬೇಕು. ಅಲ್ಲದೇ ಹೊಸ ಉದ್ದಿಮೆಗಳಿಗೆ ಹಂಚಿಕೆ ಮಾಡಲು ಕ್ರಮವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಘಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 15 ಮಳಿಗೆಗಳ ಹಂಚಿಕೆಗೆ ಸಭೆಯಲ್ಲಿ ಇದೆ ವೇಳೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಬೀದರ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಶೆಟಕಾರ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಶಿವರಾಜ ಹಲಶೆಟ್ಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಿ.ಎಂ.ಕಮತಗಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧಿಕಾರಿ ಸತ್ಯವ್ರತ, ಕರ್ನಾಟಕ ಕೈಗಾರಿಕಾಭಿವೃದ್ಧಿ ಪ್ರದೇಶ ಮಂಡಳಿಯ ಅಧಿಕಾರಿ ಪ್ರಕಾಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ನಾಗಪ್ಪ ರೆಡ್ಡಿ ಹಾಗೂ ಕೈಗಾರಿಕೋದ್ಯಮಿಗಳು ಮತ್ತು ಇತರರು ಇತರರು ಇದ್ದರು.