ಹೊಸ ಉದ್ಯೋಗ ನೀತಿಗೆ ಸಂಪುಟ ಅಸ್ತು


ಬೆಂಗಳೂರು, ಜು. ೨೨- ರಾಜ್ಯದ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಒದಗಿಸುವ ಹೊಸ ಉದ್ಯೋಗ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದ ವಿವಿಧ ಕೈಗಾರಿಕೆಗಳು ಹಾಗೂ ಉದ್ಯಮಗಳಲ್ಲಿ ಕನ್ನಡಿಗರಿಗೆ ಅದರಲ್ಲೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಹೊಸ ಉದ್ಯೋಗ ನೀತಿ ೨೦೨೨-೨೫ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಈ ಹೊಸ ಉದ್ಯೋಗ ನೀತಿಯಡಿ ಕೈಗಾರಿಕೆಗಳ ಬಂಡವಾಳ ಹೂಡಿಕೆ ಆಧಾರದ ಮೇಲೆ ಕನ್ನಡಿಗರಿಗೆ ಇಂತಿಷ್ಟೇ ಹುದ್ದೆಗಳನ್ನು ನೀಡಬೇಕು ಎಂಬ ಅಂಶಗಳು ಇವೆ.
ಈಗಿರುವ ಉದ್ಯಮಗಳು ಬಂಡವಾಳ ಹೆಚ್ಚು ಮಾಡಿದರೆ, ಹೆಚ್ಚಾಗುವ ಬಂಡವಾಳಕ್ಕೆ ಅನುಗುಣವಾಗಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ನೀಡಬೇಕು ಎಂಬ ಅಂಶಗಳನ್ನು ಹೊಸ ಉದ್ಯೋಗ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಸಂಪುಟ ಸಭೆಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹೊಸ ಉದ್ಯೋಗ ನೀತಿಯಿಂದ ಕನ್ನಡಿಗರಿಗೆ ಉದ್ಯಮಗಳ ಎಲ್ಲ ಹುದ್ದೆಗಳಲ್ಲೂ ಹೆಚ್ಚಿನ ಉದ್ಯೋಗವಾಕಶಗಳು ಸಿಗುತ್ತವೆ ಎಂದರು.
ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆಯೇ ಇಲ್ಲವೆ ಎಂಬ ಬಗ್ಗೆಯೂ ಕೈಗಾರಿಕಾ ಇಲಾಖೆ ನಿಗಾ ವಹಿಸಲಿದೆ ಎಂದು ಅವರು ಹೇಳಿದರು.
ಶಾಲಾ ಮಕ್ಕಳಿಗೆ ಶೂ-ಸಾಕ್ಸ್
ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸಲು ೧೩೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಶಾಲಾ ಮಕ್ಕಳಿಗೆ ಒಂದು ಜತೆ ಕಪ್ಪು ಶೂ ಮತ್ತು ೨ ಬಿಳಿ ಸಾಕ್ಸ್‌ಗಳನ್ನು ನೀಡಲಾಗುವುದು. ಸುಮಾರು ೪೩.೩೭ ಲಕ್ಷ ವಿದ್ಯಾರ್ಥಿಗಳು ಶೂ ಸಾಕ್ಸ್‌ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಗೆ ಗೊಬ್ಬರ ಖರೀದಿಸಲು ೪೦೦ ಕೋಟಿ ರೂ. ಸಾಲಕ್ಕೆ ಗ್ಯಾರಂಟಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಖೈದಿಗಳ ಬಿಡುಗಡೆ ತಿದ್ದುಪಡಿ
ರಾಜ್ಯದಲ್ಲಿ ಸನ್ನಡತೆಯ ಕೈದಿಗಳ ಬಿಡುಗಡೆಗೆ ಇದ್ದ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಮಕ್ಕಳು, ಶಿಶುಗಳು, ಮಹಿಳೆಯರ ಮೇಲೆ ಅಪರಾಧ ಪ್ರಕರಣ ಎಸಗಿರುವವರನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಂಪುಟ ತೀರ್ಮಾನಿಸಿದೆ. ಹಾಗೆಯೇ ಒಂದಕ್ಕಿಂತ ಹೆಚ್ಚು ಕೊಲೆ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿರುವುದಾಗಿ ಸಚಿವರು ತಿಳಿಸಿದರು.
ಸನ್ನಡತೆ ಆಧರಾದ ಮೇಲೆ ಕೈದಿಗಳ ಬಿಡುಗಡೆ ಮಾಡಲು ಮಾರ್ಗಸೂಚಿಗಳಿದ್ದು, ಈ ಮಾರ್ಗಸೂಚಿಗಳಲ್ಲಿ ಮಕ್ಕಳು, ಸ್ತ್ರೀ ಮತ್ತು ೨ ಕೊಲೆಗಳಲ್ಲಿ ಭಾಗಿಯಾಗುವ ಬಿಡುಗಡೆ ಮಾಡಿರುವ ಅಂಶವನ್ನು ತೆಗೆದು ಹಾಕಲಾಗಿದೆ ಎಂದರು.
ವಸತಿ ಹಣ ಇಳಿಕೆ
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಬಹುಮಹಡಿ ಕಟ್ಟಡ ಯೋಜನೆಯಡಿ ವಸತಿ ಇಲಾಖೆ ನಿರ್ಮಿಸಿರುವ ೨ ಬೆಡ್ ರೂಂಗಳ ಅಪಾರ್ಟ್‌ಮೆಂಟ್‌ಗಳಿಗೆ ನಿಗದಿಪಡಿಸಲಾಗಿದ್ದ ೧೫ ಲಕ್ಷ ರೂ.ಗಳ ಮೊತ್ತವನ್ನು ೧ ಲಕ್ಷ ರೂ. ಇಳಿಕೆ ಮಾಡಿ ೧೪ ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಇದರಿಂದ ಈ ಮನೆಗಳಿಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದರು.
ಮುಖ್ಯಮಂತ್ರಿಗಳ ಬಹುಮಹಡಿ ಯೋಜನೆಯ ೮ ಸಾವಿರ ಮನೆಗಳನ್ನು ನಮ್ಮ ಸರ್ಕಾರ ನಿರ್ಮಿಸಿದೆ. ಇದರಲ್ಲಿ ೬ ಸಾವಿರ ಮನೆಗಳು ಪೂರ್ಣಗೊಂಡಿವೆ ಎಂದರು.
ಹುಡ್ಕೋ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ವಸತಿ ಇಲಾಖೆಗೆ ೨೫೦ ಕೋಟಿ ರೂ.ಗಳ ಸಾಲಕ್ಕೆ ಬ್ಯಾಂಕ್ ಗ್ಯಾರಂಟಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಹಾಗೆಯೇ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಸಾವಿರ ಕೋಟಿ ರೂ. ಸಾಲಕ್ಕೂ ಬ್ಯಾಂಕ್ ಗ್ಯಾರಂಟಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಕೃಷ್ಣರಾಜ ಒಡೆಯರ್ ಹೆಸರು
ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡಲು ಸಂಪುಟ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಮೈಸೂರು ವಿಮಾನ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ೨೪೦ ಎಕರೆ ಭೂ ಸ್ವಾಧೀನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಇದ್ಕಕ್ಕಾಗಿ ಸುಮಾರು ೯ ಕೋಟಿ ೨೩ ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದರು.