ಹೊಸ್ತಿಲ ಹುಣ್ಣಿಮೆಯ ತುಂಗಾರತಿ ಫಲಪೂಜಾಮಹೋತ್ಸವ ಪಾರ್ಲಿಮೆಂಟಿಂದ ಪಂಚಾಯತಿವರೆಗೂ ಭಾಜಪ ಆಡಳಿತ: ಶ್ರೀರಾಮುಲು

ಹೊಸಪೇಟೆ ಡಿ 30 :ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಹುತೇಕ ಭಾಜಾಪ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಜಯಗೊಂಡಿದ್ದು, ಪಾರ್ಲಿಮೆಂಟಿಂದ ಪಂಚಾಯಿತಿವರೆಗೂ ಭಾಜಾಪವೇ ಆಡಳಿತ ನಡೆಸಲಿದೆಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಅವರು ಇಂದು ಸಂಜೆ ಐತಿಹಾಸಿಕ ಹಂಪಿಯ ತುಂಗಭದ್ರ ನದಿ ತಟದಲ್ಲಿ ಹೊಸ್ತಿಲ ಹುಣ್ಢಿಮೆ ಅಂಗವಾಗಿ ನಡೆದ ತುಂಗಾರತಿ ಹಾಗೂ ಫಲಪೂಜ ಮಹೋತ್ಸವದಲ್ಲಿ ವಿರೂಪಾಕ್ಷನಿಗೆ ಪೂಜೆ ಸಲ್ಲಿ ಮತ್ತು ತುಂಗಾ ಆರತಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲಾಡಳಿತ ಪ್ರತಿ ತಿಂಗಳು ಹುಣ್ಣಿಮೆಯ ದಿನ ತುಂಗಾರತಿ ನಡೆಸುತ್ತಿದೆ ಹಾಗೂ ಪ್ರತಿ ವರ್ಷದಂತೆ ವಿರುಪಾಕ್ಷಾ ಪಂಪಾದೇವಿಯ ಫಲಪೂಜಾ ಮಹೋತ್ಸವ(ನಿಶ್ಚಿತಾರ್ಥ) ಇಂದು ನಡೆಯಿತು.
ಈ ಬಾರಿಯ ತುಂಗಾರತಿ ಸಚಿವ ಆನಂದ್ ಸಿಂಗ್ ಜೊತೆಗೆ ತಾವು ಪಾಲ್ಗೊಂಡಿದ್ದಕ್ಕೆ ಸಚಿವ ಶ್ರೀರಾಮುಲು ಸಂತಸ ವ್ಯಕ್ತಪಡಿಸಿದರು.

ಹಂಪಿಯಲ್ಲಿ ನಡೆಯುವ ತುಂಗಾರತಿ, ತೆಪ್ಪೋತ್ಸವ ಪೂಜಾಕಾರ್ಯವು ಶ್ರೀಗಳ ಸನ್ನಿಧಾನದಲ್ಲಿ ಪಾಲ್ಗೊಂಡಿದ್ದು, ಕಾಶಿಯಲ್ಲಿನ ಪವಿತ್ರ ಆರತಿಯಂತೆ ನಡೆಸಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರಿಗೂ ಶುಭವಾಗಿ ಕಾಲಕಾಲಕ್ಕೆ ಮಳೆ ಬೆಳೆ ಆಗಲೆಂಬುದೇ ಹಾರೈಕೆಯಾಗಿದೆ ಎಂದರು.

ಗ್ರಾಮಪಂಚಾಯತಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಚುನಾವಣೆಯಲ್ಲಿ ಗೆದ್ದ ಬಹುತೇಕರು ಬಿಜೆಪಿಬ ಪಕ್ಷ ಬೆಂಬಲಿತ ಅಭ್ಯರ್ಥಿಗಳಿದ್ದರು, ಪ್ರಧಾನ ಮಂತ್ರಿಯವ ಕನಸಿನಂತೆ ಗ್ರಾಮ ಸ್ವರಾಜ್ಯಗೊಳ್ಳುವ ಉದ್ದೇಶಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಡೆಲ್ಲಿಯಿಂದ ಗ್ರಾಮದವರೆಗೂ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ ಎಂಬ ವಿಶ್ವಾಸವಿದೆ. ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನಗಳು ವ್ಯವಸ್ಥಿತವಾಗಿ ತಲುಪಲಿವೆ ಎಂದರು.
ಬರುವ ಚೈತ್ರ ಪೌರ್ಣಮಿಯಂದು ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ತುಂಗಾರತಿ ಮಹೋತ್ಸವದ ವಿಶೇಷ ಪೂಜೆಗೆ ಸಚಿವರೀರ್ವರು ಹಾಜರಿದ್ದು, ತುಂಗಭದ್ರ ನದಿಗೆ ಬಾಗಿನ ಅರ್ಪಿಸಿದರು. ಫಲಪೂಜಾ ಕಾರ್ಯ ದ ನಂತರ ನಡೆದ ತೆಪ್ಪೋತ್ಸವವನ್ನು ಭಕ್ತರ ಸಮೇತ ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹಂಪಿ ಪಿಡಿಓ, ದೇವಸ್ಥಾನದ ಆಡಳಿತ ಮಂಡಳಿ ಭಕ್ತವೃಂದ ಪಾಲ್ಗೊಂಡಿತ್ತು.