ಹೊಸೂರು ಬಸ್‍ನಿಲ್ದಾಣವನ್ನು ಬೇರೆ ಸ್ಥಳದಲ್ಲಿ ನಿರ್ಮಿಸುವಂತೆ ಮನವಿ


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ04. ಗ್ರಾಮದ ಬಳ್ಳಾರಿ ರಸ್ತೆ ಜನತಾ ಕಾಲೋನಿ (ಹೊಸೂರು) ಪ್ರದೇಶದ ಪ್ರಯಾಣಿಕರ ತಂಗುದಾಣವನ್ನು ಮೊದಲಿರುವ ಸ್ಥಳದಲ್ಲಿ ಬಿಟ್ಟು, ಪಕ್ಕದಲ್ಲಿಯೇ ಎಪಿಎಂಸಿ ಮಳಿಗೆಗಳ ಪಕ್ಕದಲ್ಲಿ ನಿರ್ಮಿಸುವಂತೆ ಗ್ರಾಮದ ಸಾರ್ವಜನಿಕರ ಪರವಾಗಿ ಹಳ್ಳಿಮರದ ವೀರೇಶ ಎಂಬುವವರು ಗ್ರಾಮ ಪಂಚಯಿತಿ ಪಿಡಿಒ ರವರಿಗೆ ಮನವಿ ಪತ್ರ ನೀಡಿದ್ದಾರೆ. ಪತ್ರದಲ್ಲಿ ತಿಳಿಸಿರುವಂತೆ. ಈ ಹಿಂದೆ ಇದ್ದ ತಂಗುದಾಣದ ಜಾಗದಲ್ಲಿಯೇ ಪುನಹ ತಂಗದಾಣ ನಿರ್ಮಾಣ ಮಾಡುವುದು ಬೇಡ, ಅಲ್ಲಿಯೇ ನಿರ್ಮಾಣ ಮಾಡಿದರೆ ಪ್ರಯಾಣಿಕರು ಅದರಲ್ಲಿ ಕುಳಿತುಕೊಳ್ಳುವುದಿಲ್ಲ. ಬರುವ ಬಸ್ ಕಾಣಿಸುವುದಿಲ್ಲವೆಂದು ರಸ್ತೆಗೆ ಬಂದು ನಿಲ್ಲುತ್ತಾರೆ. ಈಗ ಕಟ್ಟಿಸಲು ಉದ್ದೇಶಿಸಿರುವ ನಿಲ್ದಾಣದ ಕೊಠಡಿ ರಾತ್ರಿಹೊತ್ತು ಅನೈತಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆಯೇ ಹೊರತು ಪ್ರಯಾಣಿಕರಿಗೆ ಪ್ರಯೋಜನವಾಗುವುದಿಲ್ಲ.
ಇದರ ಬದಲಾಗಿ ಎಪಿಎಂಸಿ ಮಳಿಗೆಗಳ ಪಕ್ಕದಲ್ಲಿರುವ ಖಾಲಿಜಾಗದಲ್ಲಿ ಪಂಚಾಯಿತಿಗೆ ಅಭಿಮುಖವಾಗಿ ರೆಡಿಮೇಡ್ ತಂಗುದಾಣ ನಿರ್ಮಾಣ ಮಾಡಿದರೆ ಪ್ರಯಾಣಿಕರು ಕುಳಿತುಕೊಳ್ಳಲು ಅನುಕೂಲ, ಬಸ್ ಸಂಚಾರವೂ ಕಾಣಿಸುತ್ತದೆ. ಉದ್ದೇಶಿತ ಜಾಗವನ್ನು ಹಾಗೇ ಉಳಿಸಿದರೆ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ, ಇತರೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ, ಅಲ್ಲಿ ಸರ್ಕಲ್ ನಿರ್ಮಿಸಿದರೆ ಊರಿನ ಅಂದವೂ ಹೆಚ್ಚುತ್ತದೆ ಎಂದು ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಪಿಡಿಓ ಈ ಕುರಿತು ಅಧ್ಯಕ್ಷರು, ಸದಸ್ಯರಲ್ಲಿ ಚರ್ಚಿಸಿ ನಿರ್ಧರಿಸಲಾಗುವುದೆಂದು ತಿಳಿಸಿದರೆಂದು ಮಾಹಿತಿ ಬಂದಿದೆ.