ಹೊಸಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ, ದಾಖಲೆ ಇಲ್ಲದ 17ಲಕ್ಷರೂ ವಶ

ಕೂಡ್ಲಿಗಿ, ಮಾ.18 : ಚೆನೈ ನಿಂದ ಬೆಂಗಳೂರು –ಚಿತ್ರದುರ್ಗ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಕೆಎ 53 ಎಂಸಿ 7532 ನಂಬರ್ ಕಾರ್‌ನ್ನು ತಾಲೂಕಿನ ಹೈವೇ 50ರಲ್ಲಿ ಇಂದು ಮಧ್ಯಾಹ್ನ ಕಾನಹೊಸಹಳ್ಳಿ ಬಳಿಯ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ತೆರೆದ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ಮಾಡುವ ವೇಳೆ ಯಾವುದೇ ದಾಖಲೆ ಇಲ್ಲದ 17 ಲಕ್ಷ ರೂ. ಪತ್ತೆಯಾಗಿದೆ.
ಕಾರ್‌ನಲ್ಲಿ ಶಿವಾನಂದ ಸೇರಿ ನಾಲ್ವರಿದ್ದರು ಎನ್ನಲಾಗಿದೆ. ಕಾನಹೊಸಹಳ್ಳಿ ಪಿಎಸ್‌ಐ ಎರಿಯಪ್ಪ ಅಂಗಡಿ, ಕಂದಾಯ ನಿರೀಕ್ಷಕ ಆಲೂರು ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಚನ್ನಬಸಯ್ಯ ಹಾಗೂ ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದಿದೆ.
ಡಿಸಿ, ಎಸ್ಪಿ ಭೇಟಿ: ಕಾನಹೊಸಹಳ್ಳಿ ಬಳಿಯ ಚೆಕ್‌ಪೋಸ್ಟ್ ನಲ್ಲಿ 17 ಲಕ್ಷ ರೂ. ವಶಪಡಿಸಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ತಹಸೀಲ್ದಾರ್ ಟಿ.ಜಗದೀಶ , ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ ಇದ್ದರು.