ಹೊಸಸ್ವರೂಪದ ಸೋಂಕು ಆತಂಕ ಬೇಡ ಹರ್ಷಾ ಅಭಯ

ನವದೆಹಲಿ, ಡಿ. ೨೧- ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ಸೋಂಕು ರಾಕೆಟ್ ವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತದೆ ಎಂಬುದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಅವರು ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಸೋಂಕು ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಂತೆಯೇ ಯುರೋಪ್ ರಾಷ್ಟ್ರಗಳು ಹಾಗೂ ಸೌದಿ ಅರೇಬಿಯಾ ಬ್ರಿಟನ್ನಿನ ವಿಮಾನ ಸಂಚಾರವನ್ನೆಲ್ಲಾ ರದ್ದು ಪಡಿಸಿದೆ.
ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದಂತೆಯೇ ಎಚ್ಚೆತ್ತು ಕೊಂಡಿರುವ ಭಾರತ ಸರಣಿ ಸಭೆಗಳನ್ನು ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದೆ. ಭಾರತ ಕೂಡ ವಿಮಾನ ಸಂಚಾರವನ್ನು ರದ್ದು ಮಾಡಿ ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲಿದೆ.
ಪರಿಸ್ಥಿತಿಯ ತೀವ್ರತೆ ಅರಿತ ಕೇಂದ್ರ ಸಚಿವ ಹರ್ಷವರ್ಧನ್‌ರವರು ಬ್ರಿಟನ್ನಿನ ಹೊಸ ಸ್ವರೂಪದ ಸೋಂಕಿನ ಬಗ್ಗೆ ಅನಗತ್ಯವಾಗಿ ಭಯಪಡಲೇಬೇಕಾಗಿಲ್ಲ ಎಂದವರು ಹೇಳಿದ್ದಾರೆ.
ಹೊಸ ಸ್ವರೂಪದ ಸೋಂಕು ಭಾರತ ಅತ್ಯಂತ ಜಾಗೃತವಾಗಿದ್ದು, ಪ್ರತಿಯೊಂದು ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ವಿಜ್ಞಾನಿಗಳು ಪ್ರತಿ ಬೆಳವಣಿಗೆ ಮೇಲೆ ನಿಗಾ ವಹಿಸಿದ್ದಾರೆ. ಅಂತೆಯೇ ವೈದ್ಯಕೀಯ ಸಿಬ್ಬಂದಿಯನ್ನು ಜಾಗೃತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸಸ್ವರೂಪದ ಸೋಂಕಿನ ಬಗ್ಗೆ ಭಾರತದಲ್ಲಿ ಭಯಪಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ ಎಂದು ನನಗೆ ಅನಿಸುವುದಿಲ್ಲ. ಆದರೂ ವಿಜ್ಞಾನಿಗಳು ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬ್ರಿಟನ್ ಮತ್ತು ಭಾರತದ ಮಧ್ಯೆ ಎಲ್ಲಾ ವಿಮಾಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.

ಲಂಡನ್ ವರದಿ

ಕೊರೊನಾ ಸೋಂಕಿನ ಮೂಲ ವೈರಸ್ ಗಿಂತ ರೂಪಾಂತರ ಕೊರೊನಾ ಸೋಂಕು ಶೇಕಡಾ ೭೦ಕ್ಕೂ ಹೆಚ್ಚು ವೇಗವಾಗಿ ಹರಡುತ್ತದೆ ಜೊತೆಗೆ ಮಾನವನ ದೇಹವನ್ನು ಹೊಕ್ಕಲಿದೆ. ಹೀಗಾಗಿ ಈ ಸೋಂಕನ್ನು ನಿಗ್ರಹಿಸುವುದು ಅಗತ್ಯವಿದೆ ಇಲ್ಲದಿದ್ದಲ್ಲಿ ವಿಶ್ವದಾದ್ಯಂತ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ

ಇದಕ್ಕೆ ಇಂಬು ಕೊಡುವಂತೆ ಬ್ರಿಟನ್ನಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು ಪತ್ತೆಯಾಗಿದೆ ಇದು ಅತ್ಯಂತ ವೇಗವಾಗಿ ಹರಡುತ್ತಿದ್ದು ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ ಎಂದು ಅಲ್ಲಿನ ಸರ್ಕಾರ ಹೇಳಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.

ಹೊಸ ಸ್ವರೂಪದ ಸೋಂಕು ಪತ್ತೆ ಆಗುತ್ತಿದ್ದಂತೆ ಇಂಗ್ಲೆಂಡ್‌ನಿಂದ ಬರುವ ಮತ್ತು ಅಲ್ಲಿಗೆ ಹೋಗುವ ಎಲ್ಲ ವಿಮಾನಗಳನ್ನು ಯೂರೋಪ್‌ನ ಹಲವು ರಾಷ್ಟ್ರಗಳು ರದ್ದುಪಡಿಸಿವೆ.

ಜೊತೆಗೆ ಇಂಗ್ಲೆಂಡ್ ಸರ್ಕಾರ ಕ್ರಿಸ್ಮಸ್ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಆಚರಿಸುವಂತೆ ಜನರಿಗೆ ಸೂಚನೆ ನೀಡಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರು ತುರ್ತು ಆರೋಗ್ಯ ಸಭೆ ನಡೆಸಿ ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಠಿಣ ಕ್ರಮಕ್ಕೆ ಸೂಚನೆ:

ಹೊಸ ಸ್ವರೂಪದ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಐರೋಪ್ಯ ದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬ್ರಿಟನ್ ನ ಕೆಲಭಾಗಗಳಲ್ಲಿ ಅಷ್ಟೇ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದೆ ಹೀಗಾಗಿ ಬ್ರಿಟನ್ ನಗರಪ್ರದೇಶಗಳಲ್ಲಿ ಕಠಿಣ ನಿಯಮಗಳನ್ನು ಹೇರಲಾಗಿದೆ. ನಿನ್ನೆಯಿಂದಲೇ ಲಾಕ್ಡೌನ್ ಜಾರಿಯಾಗಿದ್ದು ಕ್ರಿಸ್ಮಸ್ ಹಬ್ಬ ಮುಗಿಯುವ ತನಕ ಮತ್ತು ಹೊಸವರ್ಷಾಚರಣೆಗೆ ಜನ ಸೇರುವುದನ್ನು ನಿಷೇಧಿಸಲಾಗಿದೆ.

ರೂಪಾಂತರಿಕ ಕೊರೋನಾ:

ಕೋವಿಡ್ ಉಂಟುಮಾಡುವ ಸೋಂಕಿನಿಂದಲೂ ಹೊಸ ಸ್ವರೂಪದ ವೈರಸ್ ಸೃಷ್ಟಿಯಾಗಿದೆ.ಮೂಲ ಸ್ವರೂಪದ ಸೋಂಕಿಗೆ ಹೋಲಿಸಿದರೆ ಇದರಲ್ಲಿ ೨೩ ಬದಲಾವಣೆಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರೂಪಾಂತರ ಕರೋನಾ ಸೋಂಕು ಅತಿ ವೇಗವಾಗಿ ಹರಡಲಿದ್ದು ಅದರ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ

ತುರ್ತು ಸಭೆ:
ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಹೊದ ಸೋಂಕು ಬಗ್ಗೆ ಚರ್ಚಿಸಲು ಅಲ್ಲಿನ ಆರೋಗ್ಯ ಸಚಿವಾಲಯದ ಮೇಲ್ವಿಚಾರಣೆ ಸಮಿತಿಯ ತುರ್ತು ಸಭೆ ಕರೆದಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಂಟಿ ಮೇಲ್ವಿಚಾರಣಾ ಸಮಿತಿಯು ಸಭೆ ಸೇರಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದೆ.

ಈ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಡಾ. ರಾಡ್ರಿಕೋ ಎಚ್ ಆಫ್ರೀನ್ ಭಾಗಿಯಾಗಲಿದ್ದಾರೆ