ಹೊಸವರ್ಷ ಸಂಭ್ರಮಕ್ಕೆ ಬ್ರೇಕ್

ಬೆಂಗಳೂರು, ಡಿ. ೨೮- ಕೊರೊನಾ ಕಾರಣದಿಂದ ಹೊಸ ವರ್ಷಾಚರಣೆಯನ್ನು ಬಹಿರಂಗವಾಗಿ ಆಚರಣೆ ಮಾಡುವುದಕ್ಕೆ ನಿಬಂಧ ಹೇರಲಾಗಿದೆ. ರೆಸಾರ್ಟ್‌ಗಳಲ್ಲಿ, ನಗರದ ಹೊರ ಭಾಗದ ಹೋಟೆಲ್‌ಗಳಲ್ಲಿ ಪಾರ್ಟಿ, ಡಿಜೆ ಸಂಗೀತ ಕಾರ್ಯಕ್ರಮಗಳನ್ನು ಮಾಡುವ ಆಗಿಲ್ಲ ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಹೇಳಿದರು.
ಹೊಸ ವರ್ಷಾಚರಣೆಯ ಮಾರ್ಗಸೂಚಿಗಳ ರೂಪುರೇಷೆಗಳ ಸಂಬಂಧ ವಿಧಾನಸೌಧದಲ್ಲಿಂದು ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಭೆ ನಡೆಸಿ ಮಾತನಾಡಿದ ಅವರು, ರೆಸಾರ್ಟ್‌ಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ. ಮ್ಯೂಸಿಕ್, ಬ್ಯಾಂಡ್ ನಿಷೇಧದ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇಂದು ಸಂಜೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದರು.
ಯಾವುದೇ ಕಾರಣಕ್ಕೂ ರಾತ್ರಿ ಕರ್ಫ್ಯೂ ವಿಧಿಸುವ ಪ್ರಶ್ನೆಯೇ ಇಲ್ಲ. ಹಾಗೆಯೇ ನಿಷೇಧಾಜ್ಞೆಯನ್ನು ಜಾರಿ ಮಾಡಲ್ಲ ಎಂದರು.
ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರಕ್ಕೆ ಪೊಲೀಸ್ ಆಯುಕ್ತರು ಇಂದು ಸಂಜೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಾರೆ ಎಂದರು.
ಈಗಾಗಲೇ ನಿನ್ನೆ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಅದಕ್ಕೆ ಮತ್ತಷ್ಟು ಮಾರ್ಗಸೂಚಿಗಳನ್ನು ಸೇರಿಸಿ ಇಂದು ಸಂಜೆ ಹೊಸ ಮಾರ್ಗಸೂಚಿಗಳು ಪ್ರಕಟವಾಗಲಿವೆ. ಸಾರ್ವಜನಿಕರ ಬಹಿರಂಗ ಆಚರಣೆಗೆ ನಿಯಂತ್ರಣ ಹಾಕಿದ್ದೇವೆ. ಆಂತರಿಕವಾಗಿ ಆಚರಣೆಗೆ ನಿಬಂಧ ಇಲ್ಲ ಎಂದರು.
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದು ನಾಪತ್ತೆಯಾಗಿರುವವರ ಪತ್ತೆಗೂ ಚರ್ಚೆ ನಡೆಸಿದೆ. ಪೊಲೀಸ್ ಇಲಾಖೆ ಇವರನ್ನು ಟ್ರ್ಯಾಕ್ ಮಾಡಿ ಪತ್ತೆಹಚ್ಚಲಿದೆ ಎಂದರು.