ಹೊಸಲಿಂಕ ಲೈನಗಳ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ನೀಡಿದ ಶಾಸಕ ಎಂ.ಬಿ.ಪಾಟೀಲ್

ವಿಜಯಪುರ, ಜೂ.4-ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಂಬಾಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ 54.8 ಕಿ.ಮೀ. ಗಳ ಹೊಸಲಿಂಕ ಲೈನಗಳ ಕಾಮಗಾರಿಗಳನ್ನು ಇಂದು ಪ್ರಾಯೋಗಿಕ ಚಾಲನೆ ನೀಡಲಾಗಿದೆ ಎಂದು ಬಬಲೇಶರ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು 10 ಎಂ.ವ್ಹಿ.ಎ. ಸಾಮಥ್ರ್ಯದ 2 ವಿದ್ಯುತ್ ಪರಿವರ್ತಕಗಳ 6.5ಕೋಟಿ ವೆಚ್ಚದಲ್ಲಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿಂದ ಹೊರ ಹೋಗುವ ಫೀಡರುಗಳ ಮೂಲಕ ವಿದ್ಯುತ್ ಜಾಲ ಸಂಪರ್ಕಿಸಲು ಅಂದಾಜು 2 ಕೋಟಿ ವೆಚ್ಚದ 54.8 ಕಿ.ಮೀ. ಉದ್ದದ 11 ಕೆ.ವಿ. ಹೊಸಲಿಂಕ ಲೈನಗಳನ್ನು ಎರಡು ತಿಂಗಳ ದಾಖಲೆ ಅವಧಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದು, 8 ಫೀಡರಗಳನ್ನು ಇಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.
ಇದರಿಂದ ಈ ಭಾಗದಲ್ಲಿ ಹೆಚ್ಚಿರುವ ನೀರಾವರಿಗೆ ಭೂಮಿಗೆ ಅತ್ಯಂತ ಅಗತ್ಯವಿರುವ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕಂಬಾಗಿ, ಶೇಗುಣಸಿ, ಸಂಗಾಪುರ, ಹಣಮಸಾಗರ, ಗುಣದಾಳ, ನಂದ್ಯಾಳ ಹಾಗು ಬೋಳಚಿಕ್ಕಲಕಿ ಗ್ರಾಮಗಳು ನೇರವಾಗಿ ಈ ಕಂಬಾಗಿ ಉಪಕೇಂದ್ರದ ವಿದ್ಯುತ್ ಸಂಪರ್ಕ ಲಾಭ ಪಡೆಯಲಿದ್ದು, ಈ ಪೂರ್ವದಲ್ಲಿದ್ದ ಮಮದಾಪುರ, ಬಬಲೇಶ್ವರ ಹಾಗೂ ಬಿದರಿ ಉಪಕೇಂದ್ರಗಳಿಂದ ಹೊರಹೋಗುವ ಲೈನಗಳು ಓವ್ಹರಲೋಡ ಆಗಿ ಕೆಲವು ಭಾಗದ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆಗೂ ಕೂಡಾ ಪರಿಹಾರ ದೊರಕಿದೆ ಎಂದು ತಿಳಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಈ ವಿದ್ಯುತ್ ಕೇಂದ್ರ ಹಾಗೂ ಅವಧಿ ಮುನ್ನವೇ ಲಿಂಕ್ ಲೈನ್ ಗಳನ್ನು ಪೂರ್ಣಗೊಳಿಸಿ, ರೈತರ ಸೇವೆಗೆ ನೀಡಿದ ಕೆ.ಪಿ.ಟಿ.ಸಿ.ಎಲ್ ಹಾಗೂ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಎಂ.ಬಿ.ಪಾಟೀಲ್ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಹರ್ಷವ್ಯಕ್ತಪಡಿಸಿದ್ದಾರೆ.