ಹೊಸಬರಿಗೆ ಮಂತ್ರಿಪಟ್ಟ ನೀಡಲು ಮಮತಾ ಚಿಂತನೆ

ಕೊಲ್ಕತ್ತಾ, ಆ.೧- ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ವಿವಾದ ನಡುವೆ ಹೊಸ ಮುಖಗಳಿಗೆ ಮಂತ್ರಿಗಿರಿ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಿಂತನೆ ನಡೆಸಿದ್ದಾರೆ.

ಶೀಘ್ರದಲ್ಲೇ ಸಚಿವ ಸಂಪುಟ ಪುನರ್ ರಚನೆಗೆ ತಯಾರಿ ನಡೆಸಿರುವ ಅವರು ಐವರು ಹೊಸ ಮುಖಗಳನ್ನು ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಮಮತಾ ಬ್ಯಾನರ್ಜಿ, ನಾವು ಸಚಿವ ಸಂಪುಟವನ್ನು ಪುನರ್ ರಚಿಸುತ್ತೇವೆ. ಆದರೆ ಕೆಲವು ಮಾಧ್ಯಮ ವರದಿಗಳು ಹೇಳುವಂತೆ ಎಲ್ಲರನ್ನೂ ಸಂಪೂರ್ಣವಾಗಿ ಬದಲಾಯಿಸುವುದಿಲ್ಲ ಎಂದರು.

ಪಾರ್ಥ ಚಟರ್ಜಿ ನಿವಾಸದಲ್ಲಿ ಕೋಟಿ ರೂಪಾಯಿ ನಗದು, ಚಿನ್ನಾಭರಣ ಇಟ್ಟಿರುವುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿತ್ತು.ಆನಂತರ ಅವರನ್ನು ಸ್ಥಾನದಿಂದ ವಜಾಗೊಳಿಸಲಾಗಿದೆ. ಅದೇ ರೀತಿ,
ಹಿರಿಯ ಸಚಿವ ಸುಬ್ರತಾ ಮುಖರ್ಜಿ ಕಳೆದ ವರ್ಷ ನಿಧನರಾಗಿದ್ದರು. ಮುಖರ್ಜಿ ಅವರು ಪಂಚಾಯತ್ ಇಲಾಖೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಹೊಂದಿದ್ದರು

ಹಾಗಾಗಿ, ಐವರು ಹೊಸ ಮುಖಗಳನ್ನು ಸಂಪುಟಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಬುಧವಾರ ಪುನರ್ ರಚನೆ ಘೋಷಣೆಯಾಗುವ ಸಾಧ್ಯತೆ ಇದೆ. ನಾಲ್ವರು ಹಾಲಿ ಸಚಿವರನ್ನು ತೆಗೆದುಹಾಕಲಾಗುವುದು ಮತ್ತು ಅವರ ಸೇವೆಯನ್ನು ಟಿಎಂಸಿ ಪಕ್ಷಕ್ಕೆ ಸೀಮಿತಗೊಳಿಸಲು ಚಿಂತನೆ ನಡೆಸಲಾಗಿದೆ.