ಹೊಸಪೇಟೆ ಸೇರಿ ವಿಜಯನಗರ ಜಿಲ್ಲೆಯಲ್ಲಿಯೂ ಸ್ತಬ್ಧ.

ಹೊಸಪೇಟೆ ಏ25: ಕೋವಿಡ್ ಹರಡದಂತೆ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರ್ಕಾರದ ಘೋಷಣೆಯಂತೆ ವೀಕೆಂಡ್ ಲಾಕ್‍ಡೌನ್‍ಗೆ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯು ಸ್ತಬ್ಧವಾಗಿತು.
ಅಗತ್ಯ ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಲಾಕ್ ಆಗಿದ್ದು ವೈದ್ಯಕೀಯ ಸೇವೆ ಹೊರತುಪಡಿಸಿ ಬಹುತೇಕ ಎಲ್ಲಾ ಅಗತ್ಯಸೇವೆಗಳು ಸಹ 10 ಗಂಟೆಗೆ ಸೇವೆಯನ್ನು ಸ್ಥಗಿತಗೊಸಿದವು. ತರಕಾರಿ ಮಾರ್ಕೆಟ್, ಕಿರಾಣಿ ಅಂಗಡಿಗಳು, ಹೋಟೆಲ್‍ಗಳು ಸಹ ಲಾಕ್ ಆಗುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ಮೇನ್ ಬಜಾರ್, ಕಾಲೇಜು ರಸ್ತೆ, ಬಸ್ ನಿಲ್ದಾಣ ರಸ್ತೆ, ಡ್ಯಾಂ ರಸ್ತೆ, ಹಾಗೂ ಹಂಪಿ ರಸ್ತೆಗಳು ಜನ ಸಂಚಾರವಿಲ್ಲದೆ ಬಣಗುಡುತ್ತಿದ್ದವು.
ನಗರದ ಗಾಂಧಿ ವೃತ್ತ, ತರಕಾರಿ ಮಾರ್ಕೆಟ್ ಸೇರಿದಂತೆ ನಾನಾ ಕಡೆ ಹಣ್ಣು ಹಂಪಲು ಮಾರಾಟ ಮಾಡುವ ಗಾಡಿಗಳು ಸಹ ಮನೆಗೆ ತೆರಳಿದ್ದರಿಂದ ಸದಾ ಜನನಿಬಿಡಪ್ರದೇಶವಾಗಿರುವ ಈ ರಸ್ತೆಗಳು ಸ್ತಬ್ಧವಾಗಿದ್ದವು.
ಎಪಿಎಂಸಿಗೆ ಭೇಟಿ ನೀಡಿದ ಅಧಿಕಾರಿಗಳು
ಭಾನುವಾರ ವಾರದ ಸಂತೆ ಸೇರಿದಂತೆ ನಿತ್ಯವೂ ಜನ ಜಂಗುಳಿಯಿಂದ ತುಂಬಿರುವ ಕಾರಣ ಸರ್ಕಾರ ನೀಡಿದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪರಿಶೀಲಿಸಲು ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ನೇತೃತ್ವದಲ್ಲಿ ಡಿವೈಎಸ್‍ಪಿ ರಘುಕುಮಾರ, ತಹಶೀಲ್ದಾರ್ ಎಚ್.ವಿಶ್ವನಾಥ, ಎಪಿಎಂಸಿ ಟಿಬಿ ಡ್ಯಾಂ ವೃತ್ತ ನಿರೀಕ್ಷಕ ನಾರಾಯಣ, ಕಾರ್ಯದರ್ಶಿ, ಪೌರಾಯುಕ್ತ ಮನ್ಸೂರಅಲಿ, ಪರಿಸರ ಅಭಿಯಂತರೆ ಆರತಿ, ಸಮುದಾಯ ಸಂಘಟಿಕ ರವಿಕುಮಾರ ಸೇರಿದಂತೆ ಅಧಿಕಾರಿಗಳ ತಂಡ ಎಪಿಎಂಸಿ ಸಗಟು ವರ್ತಕರೊಂದಿಗೆ ಮಾತುಕತೆ ನಡೆಸಿದರು. ಈ ಕುರಿತು ಮಾತನಾಡಿದ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಕೋವಿಡ್-19 ಎರಡನೇ ಅಲೆ ತೀವೃವಾಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿದೆ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳದೆ ಕೇವಲ ಸಗಟು ಮಾರಾಟವನ್ನು ಮಾತ್ರ ಮಾಡಬೇಕು ಎಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಪಿಎಂಸಿ ಅಧಿಕಾರಿಗಳು ಸಹ ಸಗಟು ವ್ಯಾಪಾರಿಗಳು ಚಿಲ್ಲರೆ ಮಾರಾಟ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದರು.