ಹೊಸಪೇಟೆ ನಗರಸಭೆ: 2.40ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.14: ಹೊಸಪೇಟೆ ನಗರಸಭೆಯಲ್ಲಿ ಜನಸ್ನೇಹಿಯಾಗಿ ಸೋಮವಾರ ಮಂಡಿಸಿದ 2.40ಕೋಟಿ ಉಳಿತಾಯ ಬಜೆಟ್‍ಗೆ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುಂಕಮ್ಮ ಅಧ್ಯಕ್ಷತೆಯಲ್ಲಿ ಜರುಗಿದ 2023/24ನೇ ಸಾಲಿನ ಆಯ-ವ್ಯಯದಲ್ಲಿ ಎಲ್ಲಾ ಮೂಲಗಳಿಂದ 80.04ಕೋಟಿ ರೂ.ಗಳ ಸ್ವೀಕೃತಿ ನಿರೀಕ್ಷೆ ಮಾಡಲಾಗಿದ್ದು, 77.63ಕೋಟಿ ರೂ.ಗಳ ಪಾವತಿ ಎಂದು ಅಂದಾಜಿಸಲಾದ್ದು, 2023-24ನೇ ಆರ್ಥಿಕ ವರ್ಷದಲ್ಲಿ 2.40ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಉಪಾಧ್ಯಕ್ಷ ಎಲ್.ಎಸ್. ಆನಂದ್ ಆಯ-ವ್ಯಯ ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು.
ವಾರ್ಡುಗಳ ಸಮಸ್ಯೆಗಳ ಬಗ್ಗೆಯೂ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು. ಸಭೆಯ ನಂತರ ಪೌರಾಯುಕ್ತ ಮನೋಹರ್ ಮಾಧ್ಯಮದವರೊಂದಿಗೆ ಮಾತನಾಡಿ..ಪಟ್ಟಣದಲ್ಲಿ ಸುಮಾರು 6500 ಜನ ನಿರಾಶ್ರಿತರಿದ್ದು, ಅವರಿಗೆ ನಿವೇಶನ, ವಸತಿ ನಿರ್ಮಿಸಲು 150ಕೋಟಿ. ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಬರುವ ಜೂನ್ ತಿಂಗಳಿಂದ ಕಾಗದ ರಹಿತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದರು. ಹಳೇ ದಾಖಲಾತಿಗಳನ್ನು ಡಿಜಿಟಲೀಕರಣ ಗೊಳಿಸಿ ಭದ್ರಪಡಿಸುವ ಕ್ರಮಕ್ಕೆ ಮುಂದಾಗಿಜದೆ, ಫಾರಂ ನಂ.3 ವಿತರಣೆಗಾಗಿ ಏಕಗವಾಕ್ಷ ಪದ್ದತಿಯನ್ನು ತಕ್ಷಣವೇ ಜಾರಿಯಲ್ಲಿ ತರುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು. ನಗರವಾಸಿಗಳು ಮನೆಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದು, ಅಂತವರನ್ನು ಗುರುತಿಸಿ ದಂಡ ವಿಧಿಸಲು ನಗರದ ಪ್ರಮುಖ 50 ಸ್ಥಳಗಳಲ್ಲಿ ಸಿಸಿ ಕೆಮೆರಾ ಅಳವಡಿಸಲು ತೀರ್ಮಾನಿಸಿದ್ದು, ಘನತ್ಯಾಜ್ಯ ನಿರ್ವಹಣೆ, ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು 15 ಜನ ನಗರಸಭೆ ಸಿಬ್ಬಂದಿಯನ್ನೊಳಗೊಂಡ ಹಸಿರು ತಂಡವನ್ನು ಸಜ್ಜುಗೊಳಿಸಲಾಗುವುದೆಂದು ವಿವರಿಸಿದರು. ಪಟ್ಟಣದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಗೆ 1ಕೋಟಿ ರೂಪಾಯಿ ಅನುದಾನ ಕೊಡಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ,  ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ನಗರದ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದುರು. ಇಲ್ಲಿಯವರೆಗೆ ಸುಮಾರು 1000 ಬೀಧಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈ ವರ್ಷ 2000 ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕೇಂದ್ರವಾದ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಸಾಮಾನ್ಯರ ಅಭಿವೃದ್ದಿಯ ಪೂಕರವಾಗಿ ಈ ಬಾರಿ ಬಜೆಟ್ ರೂಪಿಸಲಾಗಿದೆ ಎಂದು ಅಧ್ಯಕ್ಷೆ ಸುಂಕಮ್ಮ ಮಾದ್ಯಮಗಳಿಗೆ ತಿಳಿಸಿದರು.