ಹೊಸಪೇಟೆ ನಗರಸಭೆ: ಸಿಬ್ಬಂದಿ ಕೊಟ್ಟ ಲಿಖಿತ ಹೇಳಿಕೆ ಮೇಲೆಯೇ 2 ದಿನದಲ್ಲಿ ಮಾಧ್ಯಮಕ್ಕೆ ತೋರಿಸುವ ವಾಗ್ದಾನ : ಕಡತ ಪರಿಶೀಲಿಸದೆ ಇದೆ ಎಂದ ಆಯುಕ್ತ

ಸಂಜೆವಾಣಿ ವಾರ್ತೆಹೊಸಪೇಟೆ ಆ26: ಹೊಸಪೇಟೆ ನಗರಸಭೆಯ ಮಹತ್ವದ ಕಡತಗಳು ಮಾಯವಾಗಿರುವುದು ನಿಜ ಎಂದು ಮೂರು ದಿನದ ಹಿಂದೆ ಹೇಳಿದ್ದ ಆಯುಕ್ತ ಬಿ.ಟಿ.ಬಂಡಿವಡ್ಡರ್‌ ಶುಕ್ರವಾರ ತಮ್ಮ ಹೇಳಿಕೆ ಬದಲಿಸಿಕೊಂಡಿದ್ದು, ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ, ಎಲ್ಲವೂ ಇರುವ ಕುರಿತು ಸಿಬ್ಬಂದಿ ಲಿಖಿತ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.ಸಿಬ್ಬಂದಿ ನೀಡಿದ ಲಿಖಿತ ಹೇಳಿಕೆಯನ್ನು ನಂಬಿ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ಜಿಲ್ಲಾಧಿಕಾರಿ ಅವರಿಗೂ ಇದೇ ಆಧಾರದಲ್ಲಿ ಇನ್ನೊಂದು ವರದಿ ಸಲ್ಲಿಸಿದ್ದೇನೆ. ನಾಪತ್ತೆಯಾಗಿದೆ ಎಂದು ಆರೋಪಿಸಲಾದ ಕಡತಗಳು ನಗರಸಭೆಯ ಕಡತ ಕೊಠಡಿಯಲ್ಲೇ ಇರುವುದನ್ನು ನಾನು ಖುದ್ದಾಗಿ ಪರಿಶೀಲಿಸಿಲ್ಲ. ಸೋಮವಾರ ಸಂಜೆ ಮಾಧ್ಯಮದ ಮುಂದೆ ಬರಲಿದ್ದೇನೆ‘ ಎಂದು ಅವರು ಶುಕ್ರವಾರ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಕಡತಗಳು ನಾಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಅವರಿಗೆ ಬರೆಯಲಾದ ಪತ್ರ ನಕಲಿಯಾಗಿದೆ ಎಂದು ಸ್ವತಃ ಸಿಬ್ಬಂದಿಯೇ ಹೇಳಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಕಡತಗಳು ಎಲ್ಲಿಗೂ ಹೋಗಿಲ್ಲ, ಕಚೇರಿಯೊಳಗೆಯೇ  ಇದ್ದ  22ರಂದು ಕರ್ನಾಟಕ ರಕ್ಷಣಾ ವೇದಿಕೆಯವರು ಸಾರ್ವಜನಿಕರ ಸಮಕ್ಪಮದಲ್ಲಿ ಕಡತಗಳ ಪರಿಶೀಲನೆಗೆ ಕೋರಿಕೆ ಸಲ್ಲಿಸಿದ ಮೇರೆಗೆ ಅಂದು ಕಡತಗಳ ಪರಿಶೀಲನೆ ನಡೆಸಲಾಗಿತ್ತು. ಆಗ ಕೆಲವು ಕಡತಗಳ ಸಿಕ್ಕಿಲ್ಲ ಎಂದು ಹೇಳಿದ್ದು ನಿಜ. ಜಿಲ್ಲಾಧಿಕಾರಿ ಅವರಿಗೆ ಈ ನಿಟ್ಟಿನಲ್ಲಿ ಅದೇ ದಿನ ಕರವೇ ಅವರಿಗೆ ತೋರಿಸಿದ ಕಡತಗಳು ಮತ್ತು ತೋರಿಸದೆ ಇರುವ ಕಡತಗಳ ಬಗ್ಗೆ ಮಾಹಿತಿ ನೀಡಿದ್ದೆ. ಇದೀಗ ಎಲ್ಲಾ ಕಡತಗಳು ಇರುವುದು ಸಾಬೀತಾಗಿದ್ದರಿಂದ ಅದೇ ಪ್ರಕಾರ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದೇನೆ’ ಎಂದು ಆಯುಕ್ತರು ಸಮಜಾಯಿಸಿ ನೀಡಿದರು.ಕಡತಗಳು ನಾಪತ್ತೆಯಾದ ವಿಚಾರ ಪ್ರಚಾರಗೊಂಡ ಬಳಿಕ ರಾತ್ರೋರಾತ್ರಿ ಅವುಗಳನ್ನು ತಂದು ಇಡಲಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದು ಆಯುಕ್ತರು ಉತ್ತರಿಸಿದರು. ಕಡತಗಳು ಕಚೇರಿಯೊಳಗೆಯೇ ಇದ್ದವು ಎಂಬುದನ್ನು ಪುನರುಚ್ಚರಿಸಿದರು.‌ತಂದು ತೋರಿಸಿ ಎಂದಾಗ ಕಕ್ಕಾಬಿಕ್ಕಿ:ಎಲ್ಲಾ ಕಡತಗಳೂ ಇದ್ದರೆ ಇಲ್ಲಿಗೇ ತಂದು ತೋರಿಸಿ ಎಂದು ಮಾಧ್ಯಮದವರು ಕೇಳಿದರು. ಆಗ ಆಯುಕ್ತರು, ನಗರಸಭೆ ಅಧ್ಯಕ್ಷೆ ಎ.ಲತಾ ಮತ್ತು ಉಪಾಧ್ಯಕ್ಷ ರೂಪೇಶ್‌ ಕುಮಾರ್ ಕಕ್ಕಾಬಿಕ್ಕಿಯಾದರು. ಕಡತ ಕೊಠಡಿಯಿಂದ ಹಾಗೆ ತಂದು ತೋರಿಸುವಂತಿಲ್ಲ ಎಂಬ ಹಾರಿಕೆಯ ಉತ್ತರವನ್ನು ಆಯುಕ್ತರು ನೀಡಿದರು. ಹಾಗಿದ್ದರೆ ಕರಾವೇ ಸಂಘಟನೆಯ ಲಿಖಿತ ಮನವಿ ಪುರಸ್ಕರಿಸಿ ಕಡತಗಳ ಪರಿಶೀಲನೆಗೆ ಏಕೆ ಒಪ್ಪಿದಿರಿ ಎಂಬ ಪ್ರಶ್ನೆಗೆ ಆಯುಕ್ತರಿಂದ ಸಮರ್ಪಕ ಉತ್ತರ ಬರಲಿಲ್ಲ. ಕಡತಗಳನ್ನು ಅವರಿಗೆ ಒಪ್ಪಿಸಿಲ್ಲ, ತೋರಿಸಲಾಗಿದೆ ಅಷ್ಟೇ ಎಂದರು. ಆರ್‌ಟಿಐ ಅರ್ಜಿ  ಹಾಕಿದರೆ ಕಡತ ತೋರಿಸಲಾಗದು ಎಂದು ಹೇಳುವ ನೀವು ರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿದ್ದು ಹೇಗೆ ಎಂಬ ಪ್ರಶ್ನೆಗೂ ಆಯುಕ್ತರು ನಿರುತ್ತರರಾದರು. ಕೊನೆಗೆ ಸಾವರಿಸಿಕೊಂಡ ಆಯುಕ್ತರು, ಶನಿವಾರ, ಭಾನುವಾರ ಸರ್ಕಾರಿ ರಜಾ ಇದೆ, ಸೋಮವಾರ ಸ್ವತಃ ಕಡತಗಳ  ಪರಿಶೀಲನೆ ನಡೆಸಿ, ಸಂಜೆ ಮಾಧ್ಯಮದ ಮುಂದೆ ಹಾಜರುಪಡಿಸುವುದಾಗಿ ಸ್ಪಷ್ಟಪಡಿಸಿದರು.10  ಮಂದಿಗೆ ನೋಟಿಸ್‌: ಕಡತಗಳು ನಾಪತ್ತೆಯಾಗಿರುವ ಬಗ್ಗೆ ಬರೆಯಲಾದ ಪತ್ರ ನಕಲಿ ಆಗಿದ್ದರೂ, ಪತ್ರದಲ್ಲಿ ಉಲ್ಲೇಖಿಸಲಾದ ನಗರಸಭೆಯ 10 ಮಂದಿ ಮಾಜಿ/ಹಾಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಬರುವ ಉತ್ತರ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಬಂಡಿವಡ್ಡರ್‌ ಹೇಳಿದರು. ಈ ಮೂಲಕ ಪತ್ರದಲ್ಲಿ ಉಲ್ಲೇಖಿಸಲಾದ ಮಾಜಿ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ನೋಟಿಸ್‌ ನೀಡಿಲ್ಲದಿರುವುದನ್ನು ಒಪ್ಪಿಕೊಂಡರು.ನಗರಸಭೆ ಸಿಬ್ಬಂದಿ ಅಥವಾ ಮಾಜಿ ಸಿಬ್ಬಂದಿಗೆ ಮಾತ್ರ ನೋಟಿಸ್‌ ಕೊಡುವ ಅಧಿಕಾರ ನನಗೆ ಇದೆ. ಹೀಗಾಗಿ 13 ಮಂದಿಯ  ಪೈಕಿ 10 ಮಂದಿಗೆ  ಮಾತ್ರ ನೋಟಿಸ್‌ ನೀಡಲಾಗಿದೆ’ ಎಂದು ಅವರು ಹೇಳಿದರು.ಹಿನ್ನೆಲೆ: ಮಾಜಿ ಸಚಿವ ಆನಂದ್‌ ಸಿಂಗ್ ಅವರ ಅಳಿಯ ಸಂದೀಪ್‌ ಸಿಂಗ್‌ ಮತ್ತು ಇತರರು ದರ್ಪ ತೋರಿಸಿ, 6–7 ತಿಂಗಳ ಹಿಂದೆ 49  ಕಡತಗಳನ್ನು ಬಲವಂತವಾಗಿ ಸಾಗಿಸಿದ್ದಾರೆ, ಅವುಗಳನ್ನು ವಾಪಸ್ ತಂದು ಕೊಟ್ಟಿಲ್ಲ ಎಂದು ದೂರಿ ಇದೇ 10ರಂದು ನಗರಸಭೆಯ ವಾಲ್‌ಮ್ಯಾನ್‌ ಸುರೇಶ್ ಬಾಬು ಡಿ.ಎಚ್‌.ಎಂಬುವವರು ಮುಖ್ಯಮಂತ್ರಿ ಸಹಿತ ಹಲವರಿಗೆ ಪತ್ರ ಬರೆದಿದ್ದರು. 22ರಂದು ಕಡತಗಳ ಪರಿಶೀಲನೆ ನಡೆಸಿದಾಗ ಹಲವು ಕಡತಗಳು ಮಾಯವಾಗಿರುವುದು ಕಂಡುಬಂದಿತ್ತು.ರಾಜಕೀಯ ಒತ್ತಡ ಇಲ್ಲಕಡತ ನಾಪತ್ತೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ನಕಲಿ ಪತ್ರದಲ್ಲಿ ಹಾಲಿ ಮತ್ತು ಮಾಜಿ ಸದಸ್ಯರ ಮೇಲೂ ಆರೋಪ ಮಾಡಲಾಗಿದೆ. ಹೀಗಾಗಿ ಸುಮಾರು 11 ಜನ ಸದಸ್ಯರು ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ಬಿಜೆಪಿ ಆಡಳಿತವಿರುವ ನಗರಸಭೆ ಉಪಾಧ್ಯಕ್ಷ ರೂಪೇಶ್‌ ಕುಮಾರ್‌ ಹೇಳಿದರು.‘ಪೊಲೀಸ್‌ ತನಿಖೆಯ ಮೇಲೆಯೇ ನಮಗೆ ನಂಬಿಕೆ ಇದೆ. ನೋಂದಾಯಿತ ಅಂಚೆಯನ್ನು ಕಳುಹಿಸಿದವರು ಯಾರು ಎಂಬ ಸಿ.ಸಿ.ಟಿ.ವಿ. ದೃಶ್ಯ ಸಿಕ್ಕಿಬಿಟ್ಟರೆ ಆರೋಪಿಯನ್ನು ತ್ವರಿತವಾಗಿ ಹಿಡಿಯುವುದು ಸಾಧ್ಯ. ಸಿಐಡಿ ಅಥವಾ ಲೋಕಾಯುಕ್ತ ತನಿಖೆಗೆ ಅಗತ್ಯ ಇಲ್ಲ’ ಎಂದು ಅವರು ಹೇಳಿಕೊಂಡರು.