ಹೊಸಪೇಟೆ ನಗರದಲ್ಲಿ ವಾರದ ಸಾವಯವ ಮಾರುಕಟ್ಟೆ ಆರಂಭಕ್ಕೆ ಚಿಂತನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು4: ಕೃಷಿ ಮೌಲ್ಯವರ್ಧನೆ ಇಂದಿನ ಅಗತ್ಯ, ಜೊತೆಗೆ ಸಾವಯವ ಕೃಷಿಕರು ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವತ್ತ ಗಮನಹರಿಸಬೇಕು, ಹೊಸಪೇಟೆ ನಗರದಲ್ಲಿ ವಾರದ ಸಾವಯವ ಮಾರುಕಟ್ಟೆ ಆರಂಭಿಸಿದರೆ ಒಳ್ಳೆಯದು ಎಂದು  ಕೃಷಿಕ ಯು.ಎಸ್. ಪ್ರಸನ್ನ ಅಭಿಪ್ರಾಯಪಟ್ಟರು.  ವಿಜಯನಗರ ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಆರಂಭವಾಗಿರುವ ʼಹಸಿರಿನೊಂದಿಗೆ ಮಾತುಕತೆʼಯ ಎರಡನೇ ಸಂವಾದಕ್ಕೆ  ಹೊಸಪೇಟೆ ಸಮೀಪದ ಅನಂತಶಯನಗುಡಿಯಲ್ಲಿರುವ ತಮ್ಮ ತೋಟದಲ್ಲಿ  ಆತಿಥ್ಯ ವಹಿಸಿ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.
ತೆಂಗಿನ ಕಾಯಿ ಮಾರಾಟದ ಬದಲು ತಾಜಾ ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆ ತಯಾರಿಸುವುದು, ಹಾಲು ಮಾರಾಟದ ಬದಲು ತುಪ್ಪ, ಬೆಣ್ಣೆ, ಹಾಲುಕೋವಾ, ಪನ್ನೀರ್ ತಯಾರಿಸಿ ಮಾರಾಟ ಮಾಡುವುದು, ತೋಟದಲ್ಲಿ ಸಗಣಿ, ತ್ಯಾಜ್ಯಗಳನ್ನು ಹಾಕಿ ಕಳೆಯಿಸಿ ಅದರಿಂದಲೇ ಎರೆಗೊಬ್ಬರ ತಯಾರಿಸುವುದು ಮತ್ತು ಮಾರಾಟ, ಗೋನಂದಾಜಲ, ಗೋಕೃಪಾಮೃತ, ನಿಂಬೆ ಕಷಾಯ ತಯಾರಿ, ತರಕಾರಿ ತೋಟ  ಮುಂತಾಗಿ ತಾವು ಅಳವಡಿಸಿಕೊಂಡಿರುವ ಹಲವು ಸರಳ ಉಪಾಯಗಳ ಬಗ್ಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕೃಷಿ ಆಸಕ್ತರಿಗೆ ಎಳೆಎಳೆಯಾಗಿ ವಿವರಿಸಿದರು. ತಮ್ಮ ಯಶಸ್ಸಿನ ಜೊತೆಗೆ ಸೋಲಿನ ಹೆಜ್ಜೆಗಳನ್ನೂ ಹಂಚಿಕೊಂಡಿದ್ದು ವಿಶೇಷ. ಕೃಷಿಕರಿಗೆ ಹೆಣ್ಣು ಸಿಗುವುದು ದುಸ್ತರ ಎಂಬುದು ತಮಗೆ ಸ್ವತಃ ಅನುಭವವಾಗಿದೆ ನೆನಪಿಸಿಕೊಂಡರು. 
ಸಭೆಯಲ್ಲಿ ಗಂಗಾವತಿ ಕೃಷಿ ಕಾಲೇಜಿನ ಡಾ.ಬದರಿಪ್ರಸಾದ್ ಅವರು ವಿವಿಧ ರಾಜ್ಯಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ತಾವು ಇತ್ತೀಚೆಗೆ ಭೇಟಿ ನೀಡಿದ ಜಮ್ಮು-ಕಾಶ್ಮೀರದಲ್ಲಿ ರೈತರು ಅಳವಡಿಸಿಕೊಂಡಿರುವ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ತಂತ್ರಗಳನ್ನು ವಿವರಿಸಿದರು.
ಹಂಪಿ ಕನ್ನಡ ವಿವಿಯ ಪ್ರೊ. ಹಳ್ಳಿಕೇರಿ, ಪರಿಸರ ಕಾರ್ಯಕರ್ತ ಸಮದ್ ಕೊಟ್ಟೂರು, ಕೃಷಿಕರಾದ ಶ್ರೀನಿವಾಸ್ ದೇವರಮನಿ, ಬಸಯ್ಯ ಸ್ವಾಮಿ ಸೇರಿದಂತೆ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಯ ೫೦ಕ್ಕೂ ಅಧಿಕ ಕೃಷಿಕರು ಮತ್ತು ಕೃಷಿ ಆಸಕ್ತರು ಭಾಗವಹಿಸಿದ್ದರು. ಹಲವು ರೈತರು ತಾವು ಬೆಳೆದ ತರಕಾರಿ, ಹಣ್ಣು, ಬಿತ್ತನೆ ಬೀಜ, ಕಾಳು ಇತ್ಯಾದಿಗಳನ್ನು ಮಾರಾಟ ಮಾಡಿದ್ದು ಮತ್ತು ವಿನಿಮಯ ಮಾಡಿಕೊಂಡಿದ್ದು ವಿಶೇಷ. ಹೊಸಪೇಟೆಯಲ್ಲಿ ಸಾವಯವ ಕೃಷಿಕರಿಗೇ ಮೀಸಲಾದ ವಾರದ ಮಾರುಕಟ್ಟೆಯನ್ನು ಆರಂಭಿಸಲು ಜಿಲ್ಲಾಧಿಕಾರಿ ಮತ್ತು ಜಂಟಿ ಕೃಷಿ ನಿರ್ದೇಶಕರನ್ನು ಭೇಟಿಯಾಗಲು ಸಭೆ ತೀರ್ಮಾನಿಸಿತು.
ʼಹಸಿರಿನೊಂದಿಗೆ ಮಾತುಕತೆʼ ನಿರ್ವಹಣಾ ತಂಡದಿಂದ ಪ್ರಸನ್ನ ಮತ್ತು ವಿದ್ಯಾ ದಂಪತಿಗಳನ್ನು ಸನ್ಮಾನಿಸಲಾಯಿತು. ಭರತೇಶ್ ಸ್ವಾಗತಿಸಿ, ಪೊಂಪಯ್ಯ ಮಳೇಮಠ್ ವಂದಿಸಿದರು. ಮಲ್ಲಿಕಾರ್ಜುನ ಹೊಸಪಾಳ್ಯ ಕಾರ್ಯಕ್ರಮ ನಿರ್ವಹಿಸಿದರು. ದೇಸಿ ಹಳ್ಳಿಕಾರ್ ಹಾಸುವಿಗೆ ಪೂಜೆ  ಸಲ್ಲಿಸುವ ಮೂಲಕ ಮಾತುಕತೆಗೆ ಚಾಲನೆ ನೀಡಲಾಯಿತು.

One attachment • Scanned by Gmail