ಹೊಸಪೇಟೆ ತಾಲೂಕು ಕ್ರೀಡಾಕೂಟ ಟಿಎಂಎಇಎಸ್ ಪಿಯು ಕಾಲೇಜು ವಿದ್ಯಾರ್ಥಿಗಳ  ಸಾಧನೆ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.12:  ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು 11 ವಿಭಾಗಗಳಲ್ಲಿ ವಿಜಯಶಾಲಿ ಆಗುವ ಮೂಲಕ ವಿಶಿಷ್ಟ ಸಾಧನೆ ಮೆರೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಡಾ. ಗೋಪಿನಾಥರಾವ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ  ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ನಡೆದ ತಾಲ್ಲೂಕು ಕ್ರೀಡಾಕೂಟದಲ್ಲಿ ಟಿಎಂಎಇಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ.          
ಗುಂಪು ವಿಭಾಗದ ಕ್ರೀಡೆಯಲ್ಲಿ ಬಾಲಕರ ತಂಡವು ವಾಲಿಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್  ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ತಂಡವು ವಾಲಿಬಾಲ್ ಮತ್ತು ಚೆಸ್ ನಲ್ಲಿ ದ್ವಿತೀಯ ಸ್ಥಾನ ತಮ್ಮದನ್ನಾಗಿಸಿಕೊಂಡಿದ್ದಾರೆ.
100 ಮೀಟರ್ ಓಟದಲ್ಲಿ ವೇಣುಗೋಪಾಲ್, ರೋಣಕ್ ಪಟೇಲ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ, ಕುಮಾರಿ ತ್ರಿಷಾ ಪ್ರಥಮ ಹಾಗೂ ಕುಮಾರಿ ಅಪ್ಸರಾ ತೃತೀಯ ಸ್ಥಾನ ಗಳಿಸಿದ್ದಾರೆ. ಶಾರ್ಟ್ ಫೂಟ್ ಮತ್ತು ಜಾವೆಲಿನ್ ಥ್ರೋನಲ್ಲಿ ಕುಮಾರಿ ನಿಖತ್ ಜಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಉದ್ದ ಜಿಗಿತದಲ್ಲಿ ಕುಮಾರಿ ಕೆ.ಎಂ. ತ್ರಿಷಾ  ಪ್ರಥಮ ಮತ್ತು ಕುಮಾರ ಶ್ರೀನೀವಾಸ್ ತೃತೀಯ ಸ್ಥಾನ ಗಳಿಸಿ ಸಾಧನೆ‌ ಮೆರೆದಿದ್ದಾರೆ.  ಎತ್ತರ ಜಿಗಿತದಲ್ಲಿ ಕುಮಾರಿ ಅಪ್ಸರಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. 400 ಮೀಟರ್ ಓಟದಲ್ಲಿ ಕುಮಾರಿ ದರ್ಶಿನಿ ದ್ವಿತೀಯ, 200 ಮೀಟರ್ ಓಟದಲ್ಲಿ ಕುಮಾರ್ ಗಣೇಶ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಟ್ರಿಪಲ್ ಜಿಗಿತದಲ್ಲಿ ಕುಮಾರಿ‌ ಸುದೀರ್ಘಾ ದ್ವಿತೀಯ ತನ್ನದಾಗಿಸಿಕೊಂಡಿದ್ದಾಳೆ.   4×100 ರಿಲೇನಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಹರ್ಡಲ್ಸ್ ನಲ್ಲಿ ತ್ರಿಷಾ ಪ್ರಥಮ, ಅಪ್ಸರಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಮ್ಮರ್ ಥ್ರೊ ನಲ್ಲಿ ಕುಮಾರಿ ಕವನಾ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಕಳೆದ ಶೈಕ್ಷಣಿಕ ವರ್ಷವಷ್ಟೇ ಆರಂಭ ವಾಗಿರುವ ಟಿಎಂಎಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ವಿದ್ಯಾರ್ಥಿಗಳು ತಾಲೂಕು ಕ್ರೀಡಾಕೂಟದಲ್ಲಿ ವಿಶಿಷ್ಟ ಸಾಧನೆ ಮೆರೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ವಿಜಯಶಾಲಿಯಾದ  ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಕರಾದ  ವಿ. ಮಲ್ಲಿಕಾರ್ಜುನ ಅವರನ್ನು ಹರಪನಹಳ್ಳಿ ಟಿಎಂಎಇ ಸಂಸ್ಥೆಯ ಅಧ್ಯಕ್ಷರಾದ ಷ.ಬ್ರ.ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರು, ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಪಿಯು ಕಾಲೇಜು ಸಂಸ್ಥಾಪಕರೂ, ಟಿಎಂಎಇಎಸ್ ಸಂಸ್ಥೆಯ ಸಹ ಕಾರ್ಯದರ್ಶಿಗಳೂ ಆದ  ಟಿ.ಎಂ. ವಿಜಯಕುಮಾರ್, ಕಾಲೇಜು ಆಡಳಿತ ಮಂಡಳಿಯ  ಅಧ್ಯಕ್ಷ ಎಂ.ಕೆ. ರವೀಂದ್ರ, ನಿರ್ದೇಶಕರಾದ  ಟಿ.ಎಂ. ಚಂದ್ರಶೇಖರ್, ಪ್ರಾಚಾರ್ಯರಾದ ಪ್ರೊ. ವಿ.ಎಸ್. ದಯಾನಂದ ಕುಮಾರ್, ಶೈಕ್ಷಣಿಕ ವಿಭಾಗದ ಸಂಯೋಜಕರಾದ ಪಿ.ವಿ. ಶೇಷಸಾಯಿ ಅವರು ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.