ಹೊಸಪೇಟೆಯಲ್ಲಿ ಕೋವಿಡ್ ಪತ್ತೆಗಾಗಿ ಮುಂದುವರೆದ ವಾರ್ಡ್ ಸಮೀಕ್ಷೆ

ಹೊಸಪೇಟೆ, ಮೇ.03: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೆ, ದಿನೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಹೊಸಪೇಟೆಯ ಪ್ರತಿ ವಾರ್ಡ್‍ಗಳಲ್ಲಿಯೂ ಕೋವಿಡ್ ಸಮೀಕ್ಷೆ ಭರದಿಂದ ಆರಂಭವಾಗಿದೆ.
ನಗರಸಭೆ ಅಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ತಂಡ ಪ್ರತಿ ವಾರ್ಡ್‍ಗಳಲ್ಲಿ ಸಮೀಕ್ಷೆ ನಡೆಸಿ. ಭೇಟಿನೀಡುವ ಕಾರ್ಯಕರ್ತರು ಜ್ವರ, ಕೆಮ್ಮು, ನೆಗಡಿ ಗಭೀಣಿಯರುಗಳು ಸೇರಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಒಂದೊಮ್ಮೆ ಅವರಿಗೆ ಕೋವಿಡ್ ಗುಣಲಕ್ಷಣ ಕಂಡು ಬಂದಲ್ಲಿ ಅವರಿಗೆ ಮನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಕ್ರಮವಹಿಸುವ ಸಂಬಂಧ ಸಮೀಕ್ಷೆಯಲ್ಲಿ ಅಂಶಗಳನ್ನು ಕಲೆಹಾಕುತ್ತಿದ್ದಾರೆ.
ಕೋವಿಡ್ ಸೋಂಕಿನ ತೀವ್ರತೆಯಿಂದ ಬಳಲುತ್ತಿದ್ದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗುತ್ತಿದೆ. ಜತಗೆ ಕೋವಿಡ್ ಸೋಂಕಿತರ ಏರಿಯಾ ಹಾಗೂ ಮನೆಗಳನ್ನು ಸೀಲ್‍ಡೌನ್ ಮಾಡಲಾಗುತ್ತಿದೆ. ಸೋಂಕಿತರು ಮನೆಯಿಂದ ಹೊರ ಬರದಂತೆ ಸಲಹೆ ನೀಡಲಾಗುತ್ತಿದೆ. ಆರೋಗ್ಯದಲ್ಲಿ ಏರುಪೇರು ಏನಾದರೂ ಕಂಡು ಬಂದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಂಬರ್‍ಗೆ ಕಾಲ್ ಮಾಡುವಂತೆ ಸೂಚಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹಾಗೂ ತಹಶೀಲ್ದಾರ್ ಎಚ್.ವಿಶ್ವನಾಥ ಖುದ್ದ ಮಾಹಿತಿಗಳನ್ನು ಪಡೆಯುತ್ತಿದ್ದು ಅವರ ನಿರ್ದೇಶನದಂತೆ ತಾಲೂಕು ವೈದ್ಯಾಧಿಕಾರಿಗಳು ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ.
ಮುಂದುವರೆದ ಸ್ಯಾನಿಟೈಜೇಷನ್ :
ನಗರದ ಕೆಲ ಪ್ರಮುಖ ರಸ್ತೆ ಸೇರಿದಂತೆ ವಾರ್ಡ್‍ಗಳಲ್ಲಿ ನಗರಸಭೆ ವಾಹನದ ಮೂಲಕ ಸ್ಯಾನಿಟೈಜರ್ ಮಾಡಲಾಗುತ್ತಿದೆ. ನಗರದ ಸ್ಟೇಶನ್ ರಸ್ತೆ, ಮೇನ್ ಬಜಾರ್, ನಾನಾ ಕಡೆಗಳಲ್ಲಿ ಸ್ಯಾನಿಟೈಜರ್ ಮಾಡಲಾಯಿತು. ಸೋಂಕಿನ ಪ್ರಮಾಣ ಹೆಚ್ಚಿರುವ ಕಡೆಗಳಲ್ಲಿ ನಿರಂತರ ಸ್ಯಾನಿಟೈಜರ್ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.