ಹೊಸಪೇಟೆಯಲ್ಲಿ ಕೈ ಶಕ್ತಿ ಪ್ರದರ್ಶನ

ಪ್ರಜಾಧ್ವನಿ ಯಾತ್ರೆ
ಹೊಸಪೇಟೆ, ಜ. ೧೭- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್, ಸಂಕ್ರಾಂತಿ ಹಬ್ಬದ ಬಿಡುವಿನ ಬಳಿಕ ಹೊಸಪೇಟೆಯಿಂದ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಪುನಾರಾಂಭಗೊಂಡಿದೆ. ಈ ಮೂಲಕ ಹೊಸಪೇಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು.ಡಾ. ಪುನೀತ್ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಗೆ ಸಸಿಗೆ ನೀರೆರೆಯುವ ಮೂಲಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಂಡೇ ಹರಿದು ಬಂದಿದೆ.ಬಸ್ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಡಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ರಣೋತ್ಸಾಹ ಕಂಡು ಬಂದಿದೆ.
ಸಿದ್ದರಾಮಯ್ಯನವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕಾರ್ಯಕರ್ತರ ಶಿಳ್ಳೆ , ಚಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕುರ್ಚಿಗಾಗಿ ಪರದಾಟ
ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿರುವುದರಿಂದ ಕುರ್ಚಿಗೆ ಪರದಾಡುವಂತಾಗಿದೆ. ೨೦ ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಹೊತ್ತು ಕಳೆದಂತೆ ಕಾರ್ಯಕರ್ತರ ದಂಡೇ ಸಮಾವೇಶದಲ್ಲಿ ಜಮಾಯಿಸಿದೆ. ಇದರಿಂದಾಗಿ ಕಾರ್ಯಕರ್ತರು ಕುರ್ಚಿಗಾಗಿ ಹೆಣಗಾಡುವಂತಾಗಿದೆ.
ಪರಿಸ್ಥಿತಿಯನ್ನು ಅರಿತು ಹೆಚ್ಚಿನ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಡು ಬಿಸಿಲಿನಲ್ಲಿ ಕಾರ್ಯಕರ್ತರು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಕಾರ್ಯಕರ್ತರು ದಂಡೇ ಪಾಲ್ಗೊಂಡಿರುವುದರಿಂದ ಕೊಂಚ ಏರುಪೇರಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.