
ಸಂಜೆವಾಣಿ ವಾರ್ತೆ
ಹನೂರು: ಆ.24:- ರೈತರು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ರೈತ ಮುಖಂಡ ಹಾಗೂ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ರವರು ತಿಳಿಸಿದರು.
ತಾಲೂಕಿನ ರಾಮಪುರ ಹೋಬಳಿ ಹೊಸದೊಡ್ಡಿ ಗ್ರಾಮದಲ್ಲಿ ನೂತನವಾಗಿ ರೈತ ಸಂಘ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ರೈತರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬ ರೈತರು ಸಹ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವುದನ್ನು ರೂಡಿಸಿಕೊಳ್ಳಬೇಕು.
ರೈತರ ಪ್ರತಿಭಟನೆಗಳೆಂದರೆ ಅಧಿಕಾರಿ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗುವುದು ಅಷ್ಟೇ ಅಲ್ಲ ಸ್ವ ಅಭಿವೃದ್ಧಿಯನ್ನು ಕೂಡ ಮಾಡಿಕೊಳ್ಳಬೇಕು.
ರೈತರು ತಮ್ಮ ಜಮೀನುಗಳಲ್ಲಿ ವಿಭಿನ್ನ ಫಸಲುಗಳನ್ನು ಬೆಳೆಯುವ ಮೂಲಕ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಬೇಕು. ಮುಂದಿನ ನಮ್ಮ ಪೀಳಿಗೆಯ ನಮ್ಮ ಮಕ್ಕಳಿಗಾಗಿ ಫಲವತ್ತಾದ ಭೂಮಿಯನ್ನು ಉಳಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ಕಾರ್ಯದರ್ಶಿ ಶಾಂತಕುಮಾರ್, ರೈತ ಮುಖಂಡರಾದ ಆಲಹಳ್ಳಿ ಉಮೇಶ್, ರಘು ಶಿಂಡನಪುರ, ಸಂಪತ್, ಶ್ರೀನಿವಾಸ್ ಮತ್ತು ಗ್ರಾಮದ ರೈತರು ಉಪಸ್ಥಿತರಿದ್ದರು.