ಹೊಸದುರ್ಗ: “ಫಿಟ್ ಇಂಡಿಯಾ ಪ್ರೀಡಂ ರನ್”ಗೆ ತಹಶೀಲ್ದಾರ್ ಚಾಲನೆ

ಚಿತ್ರದುರ್ಗ,ಸೆ.25; ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಅಂಗವಾಗಿ ಹೊಸದುರ್ಗ ಪಟ್ಟಣದಲ್ಲಿ ಶನಿವಾರ ನಡೆದ ಸ್ವಾಸ್ಥ್ಯ ಸಮಾಜ, ಸ್ವಾಸ್ಥ್ಯ ದೇಶಕ್ಕಾಗಿ ಫಿಟ್ ಇಂಡಿಯಾ ಪ್ರೀಡಂ ರನ್ 2.0 ಕಾರ್ಯಕ್ರಮಕ್ಕೆ ತಹಶೀಲ್ದಾರ್ ತಿಪ್ಪೇಸ್ವಾಮಿ ಚಾಲನೆ ನೀಡಿದರು.
ಭಾರತ ಸರ್ಕಾರ ನೆಹರು ಯುವ ಕೇಂದ್ರ, ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿತ್ರದುರ್ಗ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪುರಸಭೆ, ಸರ್ಕಾರಿ ನೌಕರರ ಸಂಘ, ರೆಡ್ ಕ್ರಾಸ್ ಸಂಸ್ಥೆ, ಸ್ಕೌಟ್ಸ್ ಮತ್ತು ಗೈಡ್ಸ್ ಹೊಸದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಫಿಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೊಸದುರ್ಗ ಪಟ್ಟಣದ ವೀರಭದ್ರಸ್ವಾಮಿ ದೇವಸ್ಥಾನದಿಂದ ಆರಂಭವಾದ ಫಿಟ್ ಇಂಡಿಯಾ ಪ್ರೀಡಂ ರನ್ ಓಟವು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ತಾಲ್ಲೂಕು ಕ್ರೀಡಾಂಗಣದವರೆಗೂ ಸಾಗಿ ನಂತರ ಸಮಾರೋಪಗೊಂಡಿತು.
ಓಟದಲ್ಲಿ ಪಾಲ್ಗೊಂಡಿದ್ದವರು ಫಿಟ್ ಇಂಡಿಯಾ ಪ್ರೀಡಂ ರನ್, ಆಜಾದಿ ಕಾ ಅಮೃತ ಮಹೋತ್ಸವ ಬರಹ ಹೊಂದಿದ್ದ ಟೀ ಶರ್ಟ್ ಧರಿಸಿದ್ದರು. ಬೊಲೊ ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂಬಿತ್ಯಾದಿ ಘೋಷಣೆಗಳು ದೇಶಾಭಿಮಾನ ಮೂಡಿಸಿದವು.
ಫಿಟ್ ಇಂಡಿಯಾ ಪ್ರೀಡಂ ರನ್ ಓಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ನೀಡಿದ ಮಹಾನ್ ನಾಯಕರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಬ್ರಿಟೀಷರ ದಾಸ್ಯದಿಂದ ವಿಮುಕ್ತಿಹೊಂದಿ 1947 ಆಗಸ್ಟ್14ರ ರಾತ್ರಿ 12 ಗಂಟೆಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಇದರ ದ್ಯೋತಕವಾಗಿ ಪ್ರತಿ ವರ್ಷವೂ ಆಗಸ್ಟ್15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ದೇಶಾದ್ಯಂತ ಫಿಟ್ ಇಂಡಿಯಾ ಪ್ರೀಡಂ ರನ್ ಆಚರಣೆ ಮಾಡಲಾಗುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ನಮಗೆ ಯಾವ ರೀತಿಯಾಗಿ ಲಭಿಸಿತು ಎಂಬುವುದರ ಬಗ್ಗೆ ಇಂದಿನ ಯುವ ಜನತೆಗೆ ತಿಳಿವಳಿಕೆ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.  
ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮಾತನಾಡಿ, ಪ್ರಧಾನಮಂತ್ರಿಗಳ ಫಿಟ್ ಇಂಡಿಯಾ ಆಂದೋಲನ ಯಶಸ್ವಿಗೆ ಯುವಕರೆಲ್ಲ ಸದೃಢರಾಗಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು ಎಂದರು.
ನಾವೆಲ್ಲ ಸೋಮಾರಿತನ ಬಿಟ್ಟು ದೈಹಿಕ, ಮಾನಸಿಕ ಸದೃಢತೆಗ ಬಗ್ಗೆ ಗಮನ ಹರಿಸಬೇಕು. ಯೋಗ, ಧ್ಯಾನ ಮಾಡುವುದರ ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಂಡು ದೇಶಕ್ಕೆ ಸದೃಢ ವ್ಯಕ್ತಿಗಳಾಗಬೇಕು. ದೇಶ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಅಶೋಕ್ ಮಾತನಾಡಿ, ಯುವಶಕ್ತಿ ಒಗ್ಗೂಡಿದರೆ ವಿಶ್ವದಲ್ಲೇ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮಬಹುದು. ಸ್ವಾಸ್ಥ್ಯ ಸಮಾಜ ಕಟ್ಟುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ದೇಶವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯುವ ಜನರು ಮುಂದಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ತಿಪ್ಪೇಸ್ವಾಮಿ ಫಿಟ್ ಇಂಡಿಯಾ ಪ್ರೀಡಂ ರನ್ 2.0 ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಸಾಮೂಹಿಕ ರಾಷ್ಟ್ರಗೀತೆ ಜರುಗಿತು. ಸ್ಫೂರ್ತಿ ಮತ್ತು ತಂಡದವರು ದೇಶಭಕ್ತಿ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ, ಜಿಲ್ಲಾ ಯುವ ಜನ ಅಧಿಕಾರಿ ಎನ್.ಸುಹಾಸ್, ಹೊಸದುರ್ಗ ವೃತ್ತ ಪೊಲೀಸ್ ನಿರೀಕ್ಷಕ ಎಂ.ಡಿ.ಪೈಜುಲ್ಲಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ತಾಲ್ಲೂಕು ಅಧಿಕಾರಿ ದಿವಾಕರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್, ಪುರಸಭೆ ಇಂಜಿನಿಯರ್ ತಿಮ್ಮರಾಜು, ಸ್ಕೌಟ್ಸ್ ರೋವರ್ಸ್ ಮುರುಳೀಧರ್ ಸೇರಿದಂತೆ ಮತ್ತಿತರರು ಇದ್ದರು.