ಹೊಸಗನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು:ಕಟ್ಟಿ

ಶಹಾಬಾದ: ಡಿ.31:ರಸಋಷಿ ಕುವೆಂಪು ಅವರು ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಎಂದು ಲೋಹಿತ್ ಕಟ್ಟಿ ಹೇಳಿದರು.

ಅವರು ಗುರುವಾರ ಕನ್ನಡ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಗರದ ಶಮ್ಸ್ ಸಭಾಂಗಣದಲ್ಲಿ ಕುವೆಂಪು ಅವರ ಜನ್ಮದಿನದ ನಿಮಿತ್ತ ಆಯೋಜಿಸಲಾದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ/ಆದರ್ಶಗಳು ಸಾರ್ವಕಾಲಿಕ. ವಿಶ್ವದ ಎಲ್ಲರು ಒಂದೇ ಎಂದು ವಿಶ್ವ ಭ್ರಾತೃತ್ವ, ಮಾನವತೆಯ ಸಂದೇಶ ಜಗತ್ತಿಗೆ ಸಾರಿದ ಮಹಾಕವಿ, ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಕುವೆಂಪು ಅವರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿ, ಮಾನವೀಯತೆಯ ಮಹಾನ ಚೇತನವಾಗಿ ಕಂಡುಬರುತ್ತಾರೆಂದು ಹೇಳಿದರು.

ಉಪನ್ಯಾಸಕ ಮರಲಿಂಗ ಯಾದಗಿರಿ ಮಾತನಾಡಿ, ಕುವೆಂಪು ಅವರು ಸಮೃದ್ಧ ಸಾಹಿತ್ಯವನ್ನು ರಚಿಸಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ ಸಾಹಿತಿ ಇವರಾಗಿದ್ದಾರೆ. ಜಾತಿ, ಧರ್ಮ, ಮೌಢ್ಯತೆಯಂತಹ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ‘ವಿಶ್ವ ಭಾತೃತ್ವ’ವನ್ನು ಪ್ರತಿಪಾದಿಸಿದ್ದಾರೆ ಎಂದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ಕುವೆಂಪು ಅವರ ಜನ್ಮದಿನವನ್ನು ‘ವಿಶ್ವ ಮಾನವ ದಿನ’ವನ್ನಾಗಿ ಆಚರಿಸುತ್ತಿರುವದು ಅವರು ಮಾನವೀಯತೆಗೆ ನೀಡಿರುವ ಬಹುದೊಡ್ಡ ಕೊಡುಗೆಯ ಸ್ಮರಣೆಯಾಗಿದೆ. ಕೇವಲ ಕಲ್ಪನೆ ಆಧಾರಿತ ಸಾಹಿತ್ಯಕ್ಕೆ ಭವಿಷ್ಯವಿಲ್ಲ. ಬದಲಿಗೆ ನೈಜ, ಅನುಭವ, ವೈಚಾರಿಕತೆ, ಸತ್ವವುಳ್ಳ ಸಾಹಿತ್ಯ ಪ್ರಸ್ತುತ ಹೆಚ್ಚು ಅಗತ್ಯವಾಗಿದೆ. ಅಂತಹ ಸಾಹಿತ್ಯವನ್ನು ರಚಿಸಿ, ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯಲೋಕದ ಧೃವತಾರೆತಾರೆಯಾಗಿದ್ದಾರೆ ಎಂದು ನುಡಿದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಉದ್ಘಾಟಿಸಿದರು. ಪರಿಷತ್ತಿನ ನಿರ್ದೇಶಕ ಭರತ ಧನ್ನಾ ಕವಿತೆ ವಾಚನ ಮಾಡಿದರು. ನಿವೃತ್ತ ಮುಖ್ಯಗುರು ಹಾಜಪ್ಪ ಬೀರಾಳ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ದಲಿತ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಶಂಕರ ಜಾನಾ, ಬಸವರಾಜ ಮಯೂರ, ನಾಗರಾಜ ವಾಗಮೊರೆ, ಶ್ರೀಧರ ಕೊಲ್ಲೂರ್, ವಿಶ್ವರಾಧ್ಯ ಕಟ್ಟಿ, ನಾಗಪ್ಪ ರಾಯಚೂರಕರ, ಸೇಹಲ್ ಜಾಯಿ, ಕಿರಣ ಜಡಗಿಕರ್, ಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಮೈನಾಳಕರ ಇತರರು ಇದ್ದರು.