ಹೊಸಕೋಟೆ ತಂಡದಿಂದ ಜಾನಪದ ಹಾಡುಗಳ ರಸದೌತಣ

ಧಾರವಾಡ, ನ 13: ಖ್ಯಾತ ಗಾಯಕ ಗುರುರಾಜ ಹೊಸಕೋಟೆ ಹಾಗೂ ತಂಡದ ವತಿಯಿಂದ ಜಾನಪದ ಹಾಡುಗಳ ರಸದೌತಣ ಕಾರ್ಯಕ್ರಮ ಕಲಾವಿದರ ಹಾಗೂ ಕಲಾ ರಸಿಕರ ಗಮನ ಸೆಳೆಯಿತು.
ಧಾರವಾಡ ನಗರದ ಸೃಜನಾ ರಂಗಮಂದಿರದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ “ಕೇಳಲಾರದ ಕೊನೆಯ ಹಾಡು’ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಗುರುರಾಜ ಹೊಸಕೋಟೆ, ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಿ ಕಲಾವಿದರಿಗೆ ವೇದಿಕೆಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಬಹುತೇಕ ಕಲಾವಿದರು ಬೆಂಗಳೂರಿನತ್ತ ಮುಖ ಮಾಡಬೇಕಿದೆ. ಇಲ್ಲಿನ ಕಲಾವಿದರಿಗೆ ನಮ್ಮ ಭಾಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು. ಜಾನಪದ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ನಾವು ಪ್ರತಿ ಹಂತದಲ್ಲೂ ಪ್ರಯತ್ನ ಮಾಡಬೇಕು ನಮ್ಮ ಕಲೆ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಜಾನಪದ ಹಾಡುಗಳೊಂದಿಗೆ ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಗೀತೆಗಳು, ಹಾಸ್ಯಚಟಾಕಿಗಳನ್ನು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ರೇಶ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ, ಧಾರವಾಡ ಸಂಗೀತ ಪರಂಪರೆ ದೊಡ್ಡದು. ಹಿರಿಯ ಕಲಾವಿದರು ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ. ಇಲ್ಲಿ ಎಲ್ಲ ಬಗೆಯ ಸಂಗೀತವನ್ನು ಆಸಕ್ತಿಯಿಂದ ಕೇಳುವ ದೊಡ್ಡ ವರ್ಗವಿದೆ ಎಂದರು.

ಕ್ಲಾಸಿಕ್ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ ಮಾತನಾಡಿ, ಎಲ್ಲ ಬಗೆಯ ಕಲಾ ಪ್ರಕಾರಗಳನ್ನು ಮೊಬೈಲ್‍ನಲ್ಲಿಯೇ ವೀಕ್ಷಿಸುವ ಪರಿಪಾಠ ಹೆಚ್ಚಾಗುತ್ತಿದ್ದು, ಜಾನಪದ ಹಾಡುಗಳನ್ನು ಕೇಳಲು ಆಸಕ್ತಿಯಿಂದ ಜನರು ಆಗಮಿಸಿರುವುದು ಜಾನಪದ ಸಂಗೀತದ ಹಿರಿಮೆಯನ್ನು ಪ್ರಸ್ತುತಪಡಿಸುತ್ತದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಕುಮಾರ ಬೆಕ್ಕೇರಿ, ಕೃಷ್ಣ ಜವಳಿ, ಶರಣಮ್ಮ ಗೋರೆಬಾಳ ಇದ್ದರು. ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.