ಹೊಳೆಯಲ್ಲಿ ಮುಳುಗಿ ಇಬ್ಬರು ಮೃತ್ಯು

ಸುಳ್ಯ, ಎ.೨೦- ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಇಲ್ಲಿನ ಇಚಿಲಂಪಾಡಿಯಲ್ಲಿ ನಡೆದಿದೆ.
ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(೧೮) ಹಾಗೂ ಉಮ್ಮರ್ ರವರ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್(೧೯) ಎಂದು ಗುರುತಿಸಲಾಗಿದೆ. ನೆಲ್ಯಾಡಿಯಲ್ಲಿ ತನ್ನ ಮಾವನ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಿನಾನ್ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಝಾಕಿರ್ ಜೊತೆಗೂಡಿ ಸೋಮವಾರ ಸಂಜೆ ಸ್ನಾನಕ್ಕೆಂದು ಇಚಿಲಂಪಾಡಿಯಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ತೆರಳಿದ್ದಾರೆ ಎನ್ನಲಾಗಿದೆ. ಇಚಿಲಂಪಾಡಿ ಸೇತುವೆಯ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿದ್ದಾರೆ. ಸಂಜೆ ವೇಳೆಗೆ ನದಿ ತಟದಲ್ಲಿ ಮೊಬೈಲ್ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಹಾಗೂ ಕಳಚಿಟ್ಟ ವಸ್ತ್ರ ಕಂಡುಬಂದಿದೆ. ಈ ವೇಳೆ ಜೋಬಿನ್, ಮೋಹನ್, ನವಾಝ್, ರೋಯಿ ಹಾಗೂ ರಿಜು ಎಂಬವರು ನೀರಿಗಿಳಿದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ಮೃತದೇಹ ದೊರೆತಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.