ಹೊಳೆಮಣ್ಣೂರ ಗ್ರಾ.ಪಂ. ನಲ್ಲಿ ನಡೆದ ಮತದಾನ ಜಾಗೃತಿ

ರೋಣ,ಏ28 : ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಹಯೋಗದಲ್ಲಿ ಹೊಳೆಮಣ್ಣೂರ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ವಿನೂತನ ರೀತಿಯಲ್ಲಿ ಮಾಡಲಾಯಿತು. ಮಹಿಳೆಯರು ತಮ್ಮ ಕೈಯಿಗಳ ಮೇಲೆ ಮೇಹಂದಿ ಮೂಲಕ ಮತದಾನ ಜಾಗೃತಿ ಘೋಷ ವಾಕ್ಯಗಳನ್ನು ಬರೆದು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೋಗುವ ಮೂಲಕ ಕಡ್ಡಾಯ ಮತದಾನಕ್ಕೆ ಮುಂದಾಗುವಂತೆ ಜಾಗೃತಿ ಮೂಡಿಸಿದರು. ಕೈಯಿಗಳ ಮೇಲೆ ಗೋರಂಟಿ ಯಿಂದ ಶೇ. 100 ಮತದಾನಕ್ಕೆ ಉಪಯುಕ್ತ ವಾಕ್ಯಗಳನ್ನು ಬರೆದು ಕೈಗಳನ್ನು ಜನರಿಗೆ ತೋರಿಸಿದರು ಹಾಗೂ ಮತದಾನದಿಂದ ದೇಶಕ್ಕಾಗುವ ಲಾಭದ ಕುರಿತು ಘೋಷಣೆ ಕೂಗಿದರು. ಜಾಗೃತಿ ಜಾಥಾದಲ್ಲಿ 40 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರು ಮತ ಚಲಾಯಿಸಿದಾಗ ಮಾತ್ರ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವಾಗಿದೆ. ಸಂವಿಧಾನದತ್ತವಾಗಿ 18 ವರ್ಷ ತುಂಬಿದ ಭಾರತೀಯನಿಗೆ ದೊರೆತಿರುವ ಪವಿತ್ರವಾದ ಮತದಾನದ ಹಕ್ಕನ್ನು ಸಮರ್ಥವಾಗಿ ಬಳಸಿಕೊಂಡು ಮತದಾನ ಮಾಡುವ ಅಗತ್ಯವಿದೆ ಎಂದರು. ಗ್ರಾ.ಪಂ. ಸಿಬ್ಬಂದಿಗಳು, ಕಾರ್ಯಕರ್ತೆಯರು ಇದ್ದರು.