ಹೊಳೆನರಸೀಪುರದಲ್ಲಿ ಭೂಕಂಪನ

ಹಾಸನ, ಜೂ.೨೩-ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕೆಲ ಗ್ರಾಮಗಳಲ್ಲಿ ಹಾಗೂ ಅರಸೀಕೆರೆ, ಅರಕಲಗೂಡು ತಾಲ್ಲೂಕುಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಆಗಿದೆ.
ಗುರುವಾರ ಮುಂಜಾನೆ ೪:೩೦ರ ಸುಮಾರಿಗೆ ಭೂಮಿ ಕಂಪನವಾಗಿದ್ದು, ೧೦ ಸೆಕೆಂಡ್ ಕಂಪಿಸಿದೆ. ಇದರಿಂದ ಮನೆಗಳು ಬಿರುಕು ಬಿಟ್ಟಿದ್ದು ಗ್ರಾಮಸ್ಥರು ಮನೆಯಿಂದ ಹೊರಬಂದಿದ್ದಾರೆ. ರಸ್ತೆಗಳು ಕೂಡ ಬಿರುಕು ಬಿಟ್ಟಿವೆ.
ಇನ್ನೂ, ಭೂಮಿ ಕಂಪಿಸಿದ ಹಿನ್ನೆಲೆ ಮನೆಯಲಿದ್ದ ಪಾತ್ರೆಗಳು ಹಾಗೂ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅದೇ ರೀತಿ, ಭೂಮಿಬೆಟ್ಟ ಸಾತನಹಳ್ಳಿ, ಕಲ್ಲಹಳ್ಳಿ, ದಾಳ ಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಬೆಳವಾಡಿ, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಚಿಟ್ಟನಹಳ್ಳಿ ಬಡಾವಣೆ, ನರಸಿಂಹನಾಯಕ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ.
ಮೇಲ್ನೋಟಕ್ಕೆ ದೊಡ್ಡಕಾಡನೂರು ಹಾಗೂ ದಾಳ ಗೌಡನಹಳ್ಳಿ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಲೇ ಭೂಕಂಪನವಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.