ಹೊಳಲ್ಕೆರೆ ತಾಲ್ಲೂಕಿನ ಜನರ ಋಣತೀರಿಸುವೆ; ಆಂಜನೇಯ

 ಚಿತ್ರದುರ್ಗ.ಅ.೨೩: ಹೊಳಲ್ಕೆರೆ ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅವರ ಋಣ ತೀರಿಸುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದೇನೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರ ಗ್ರಾಮದಲ್ಲಿ  ಎಸ್‌ಎಲ್‌ಎನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮುದಾಯ ಭವನ, ಪಾಕಶಾಲೆ, ಮತ್ತು ವಸತಿ ಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಮಂತ್ರಿಯಾಗಿ ಅವರ ಋಣ ತೀರಿಸಲು ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದ್ದೇನೆ. ಕ್ಷೇತ್ರದ 22 ಕೆರೆಗಳಿಗೆ ನೀರು ತರುವ ಕೆಲಸವನ್ನು ಅನುಷ್ಟಾನಗೊಳಿಸಲು ಕಾರಣನಾಗಿದ್ದೇನೆ. ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಕಾರಣ ಅಪ್ಪರ್ ಭದ್ರ ಯೋಜನೆಯಲ್ಲಿ ಹೊಳಲ್ಕೆರೆಯ ಕೆರೆಗಳಿಗೆ ನೀರು ತುಂಬಿಸಲು ಆಗುವುದಿಲ್ಲವೆಂದು ಕೈಬಿಡಲಾಗಿತ್ತು. ಅದೇ ರೀತಿ ಭರಮಸಾಗರದ ಮೂರು ಕೆರೆಗಳಿಗೆ ನೀರು ತಂದೆ. ಆದರೆ, ಈ ಯೋಜನೆ ಯಶಸ್ವಿಯಾಗಲಿಲ್ಲ. ತರಳಬಾಳು ಜಗದ್ಗುರುಗಳು ಬೇರೆ ಯೋಜನೆ ಸಿದ್ಧಪಡಿಸು ಎಂದು ಹೇಳಿದ್ದರಿಂದ ಮತ್ತೊಂದು ಯೋಜನೆ ರೂಪಿಸಿದೆ. ನಂತರ ತರಳಬಾಳು ಶ್ರೀಗಳು ಇದನ್ನು ಕೈಗೆತ್ತಿಕೊಂಡು ಒಂದೂವರೆ ವರ್ಷದದಲ್ಲಿಯೇ ತುಂಗಾಭದ್ರ ನದಿಯಿಂದ ಭರಮಸಾಗರದ ಭರಮಣ್ಣ ನಾಯಕರ ಕೆರೆಗೆ ಸುಮಾರು 55 ಕಿಮೀನ 5 ಅಡಿ ವ್ಯಾಸವುಳ್ಳ ಒಂದೇ ಪೈಫ್‌ಲೈನ್ ಮೂಲಕ ಕೆರೆಗೆ ನೀರು ಹರಿಸುವ ಜನಪರ ಕಾಳಜಿಯುಳ್ಳ ಕೆಲಸ ನೆರವೇರಿತು. ಭರಮಸಾಗರ ವ್ಯಾಪ್ತಿಯ ಜನರು ತರಳಬಾಳು ಶ್ರೀಗಳಿಗೆ ಸದಾ ಋಣಿಯಾಗಿರಬೇಕು ಎಂದರು. ನನ್ನ ಅವಧಿಯಲ್ಲಿ ಎಚ್.ಡಿ.ಪುರಕ್ಕೆ ಸಾಕಷ್ಟು ಜನಪರ ಕಾರ್ಯಗಳನ್ನು ಅನುಷ್ಟಾನ ಮಾಡಿದ್ದೇನೆ. ಇಲ್ಲಿನ ಜನರು ಸಮುದಾಯ ಭವನ ನಿರ್ಮಾಣಕ್ಕೆ ರು.50 ಲಕ್ಷ ಅನುದಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾನು ತಕ್ಷಣವೇ ರು.1 ಕೋಟಿ ಅನುದಾನ ಮಂಜೂರು ಮಾಡಿದೆ. ಹಾಗೆಯೇ 2.50ಕೋಟಿ ವೆಚ್ಚದ ಸರ್ಕಾರಿ ಆಸ್ಪತ್ರೆ, ರು.1 ಕೋಟಿ ಯಾತ್ರಿ ನಿವಾಸ ಮಂಜೂರು ಮಾಡಿಸಿದೆ.ಆದರೆ, ನನ್ನ ಕೆಲಸ ಕಾರ್ಯಗಳಿಗೆ ಜನರು ಮನ್ನಣೆ ನೀಡಲಿಲ್ಲ. ಅದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಜನರ ತೀರ್ಪನ್ನು ಸ್ವಾಗತಿಸಿದ್ದೇನೆ. ಇದೀಗ ಮತ್ತೆ ಜನರ ಬಳಿ ತೆರಳುತ್ತೇನೆ ಎಂದು ಹೇಳಿದರು.ಎಚ್.ಡಿ.ಪುರ ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ ನಾಗರಾಜ್, ಉಪಾಧ್ಯಕ್ಷ ಕೆ.ಟಿ. ಅಜ್ಜಪ್ಪ, ತಾಪಂ ಮಾಜಿ ಸದಸ್ಯರಾದ ಜಗದೀಶ್, ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ರಮೇಶ್ ಇದ್ದರು.