ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.09 : ತಾಲೂಕಿನ ಹೊಳಲು ಗ್ರಾಮದಲ್ಲಿ ಇದೇ 12 ರಂದು ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗಲಿದ್ದು, ಸ್ವಾಮಿಗೆ ಕಂಕಣಧಾರಣೆಯೊಂದಿಗೆ ವಾರ್ಷಿಕ ಜಾತ್ರೆಗೆ ಚಾಲನೆ ನೀಡಲಾಯಿತು.
ಬೆಳ್ಳಿಗ್ಗೆ ಸ್ವಾಮಿಗೆ ವಿಶೇಷ ಅಭಿಷೇಕ, ಎಲಿಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಿ ಬೆಳ್ಳಿಯ ಆಭರಣಗಳನ್ನು ತೊಡಿಸಲಾಗಿತ್ತು. ಸಂಜೆ 7ಗಂಟೆಯಿಂದ ಸಮ್ಮಾಳ ಮತ್ತು ನಂದಿಕೋಲು ವಾದ್ಯ ಹಾಗೂ ಕೈಯಲ್ಲಿ ಮತ್ತಿನಾರತಿ ಹಿಡಿದ ನಾರಿಯರ ಜೊತೆಗೂಡಿ, ಗ್ರಾಮದ ಹೂಗಾರ ಮನೆಯಿಂದ ದಂಡಿ, ಬಾಸಿಂಗವನ್ನು ತರಲಾಯಿತು. ನಂತರ ಶ್ರೀಕಾಳಿಕಾದೇವಿ ದೇವಸ್ಥಾನಕ್ಕೆ ತೆರಳಿ ದೇವಿಗೆ ದಂಡೆಹಾಕಿ ಉಡಿತುಂಬಿಸಿ ಪೂಜೆ ಸಲ್ಲಿಸಲಾಯಿತು. ತದನಂತರ ಜಾತ್ರಾ ಸಮಿತಿ ಹಾಗೂ ಗ್ರಾಮದ ಸಕಲ ಭಕ್ತರ ಸಮ್ಮುಖದಲಿ,್ಲ ಶ್ರೀಚನ್ನಬಸವ ಶ್ರೀಗಳು ಸ್ವಾಮಿಗೆ ಕಂಕಣ ಧಾರಣೆಮಾಡಿದರು. ಈ ವೇಳೆ ನೆರೆದ ಭಕ್ತರೆಲ್ಲರೂ ಹರ ಹರ ಮಹಾದೇವ ಎಂದು ಜೈ ಘೋಷ ಕೂಗಿದರು.
ನಂತರ ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಸಿಂಹಾಸನ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ, ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಲಾಯಿತು. ಗ್ರಾಮದ ಯುವಕರಿಂದ ಸ್ವಾಮಿಯ ಖಡ್ಗ ಪ್ರವಚನ ನಡೆಯಿತು. ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ಕರೆತಂದು ಮಹಾ ಮಂಗಳಾರತಿ ಮಾಡಲಾಯಿತು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ರೇವಣೆಪ್ಪ ದೇವರಮನಿ, ಜಗದೀಶ ದೇವಶೆಟ್ಟಿ, ರುದ್ರಪ್ಪ ಯೋಗಿ, ಚನ್ನಪ್ಪ ಹೊಟ್ಟಿಗೌಡ್ರ, ಶಿವಾನಂದಪ್ಪ ಬೂದನೂರು, ವೀರಪ್ಪ ಯೋಗಿ, ಬಸಣ್ಣ ದಕ್ಷಟ್ಟಿ, ಗುರುಲಿಂಗಪ್ಪ ಹಾವೇರಿ, ಬಸಯ್ಯ ಹೆಚ್.ಎಂ, ಹೇಮಪ್ಪ ಗೋರಪ್ಪನವರ, ಶಿವಪ್ಪ ತೋಟ್ರ, ಷಣ್ಮುಖಪ್ಪ ಯತ್ನಳ್ಳಿ, ವೀರಪ್ಪ ಕಣವಿ, ಯೋಗಿ ಶಿವಯೋಗಿ, ಸುರೇಶ ಬಡಿಗೇರ, ನಾಗೇಶ ಜ್ಯೋತಿ, ಪಕ್ಕೀರಶೆಟ್ಟಿ ದೇವಶೆಟ್ಟಿ, ಸಿದ್ದು ಯತ್ನಳ್ಳಿ, ಸಂದೀಪ ಬಳಿಗಾರ, ವೀರೇಶ ಮಾಗಿ, ಸೇರಿದಂತೆ ಅರ್ಚಕರಾದ ರುದ್ರಪ್ಪ ಹಾಗೂ ಚೆನ್ನಪ್ಪ ಪೂಜಾರ ಹಾಗೂ ಹೆಚ್.ಎಂ ರೇವಣಯ್ಯ ಹಾಜರಿದ್ದರು.