ಹೊಳಲು ವೀರಭದ್ರೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.13 : ತಾಲೂಕಿನ ಹೊಳಲು ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು.
ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಕರೆ ತಂದುರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ಗಂಗಾಮತಸ್ಥರಾದ ಹೇಮಪ್ಪ ಗೋರಪ್ಪನವರ ಮನೆಯಿಂದ ಹೋಳಿಗೆ ಎಡೆ ಬಂದು ನೈವೇಧ್ಯ ಮಾಡಿ, ಮಹಿಳೆಯರು ಮುತ್ತಿನಾರತಿ ಬೆಳಗಿ, ಪೂಜೆ ಸಲ್ಲಿಸಿದನಂತರ ತೇರು ಮುಂದಕ್ಕೆ ಸಾಗಿತು.
ವೀರಣ್ಣ ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಹಲ್ಲುಮುರಿಯೇ ಬಹುಪರಾಕ್ ಹರ ಹರ ಮಹದೇವ ಎಂಬ ಜಯಘೋಷದೊಂದಿಗೆ ಭಕ್ತರು ರಥವನ್ನು ಎಳೆದರು. ರಥವು ಮುಂದೆ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಹೊಳಲು ಸುತ್ತಮುತ್ತಲ ಗ್ರಾಮಗಳ ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಆಶೀರ್ವಾದ ಪಡೆದರು. ಸಮಾಳ, ನಂದಿಕೋಲು ಮಂಗಳ ವಾದ್ಯಗಳು ರಥೋತ್ಸವ ಕಳೆ ಹೆಚ್ಚಿಸಿದ್ದವು. ರಥವು ಪಾದಗಟ್ಟೆವರೆಗೆ ತೆರಳಿ ನಂತರ ಮೂಲ ಸ್ಥಳ ತಲುಪಿತು.
ಜಾತ್ರೆ ಪ್ರಯುಕ್ತ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.