ಹೊಳಲು: ಮನೆ ಕುಸಿದು ಎಮ್ಮೆ, ಆಡು ಸಾವು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.24: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಭಾನುವಾರ ಸಂಜೆ ಮಣ್ಣಿನ ಮಾಳಿಗೆ ಮನೆ ಕುಸಿದು, ಒಂದು ಎಮ್ಮೆ, ಮೂರು ಆಡುಗಳು ಸಾವಿಗೀಡಾಗಿರುವ ಘಟನೆ ಜರುಗಿದೆ.
ನಿರಂತರ ಸುರಿಯುತ್ತಿರುವ ತುಂತುರು ಮಳೆಗೆ ನೆನೆದು ಹೊಳಲು ಗ್ರಾಮದ ಬಣಕಾರ ಪಾರ್ವತಮ್ಮ ಎಂಬುವವರ ಮಣ್ಣಿನ ಮನೆಯ ಚಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಕಟ್ಟಿಹಾಕಿದ್ದ ಎಮ್ಮೆ, ಆಡುಗಳ ಮೇಲೆ ಮನೆ ಕುಸಿದು ಬಿದ್ದಿದರಿಂದ ಅವುಗಳು ಸಜೀವವಾಗಿ ಮಣ್ಣಿನಲ್ಲಿ ಹೂತು ಹೋಗಿದ್ದವು. ಇದೇ ವೇಳೆ ಜಾನುವಾರುಗಳಿಗೆ ಮೇವು ಹಾಕಲು ಬಂದಿದ್ದ ಪಾರ್ವತಮ್ಮನವರ ಮಗಳು ಹಿರಿಯಮ್ಮ ಅದೃಷ್ಟ ವಶಾತ್ ಪಾರಾಗಿದ್ದಾರೆ. ಅವರ ಕಾಲು ಮೂಳೆ ಮುರಿದಿದ್ದು ಚಿಕಿತ್ಸೆಗಾಗಿ ಹಾವೇರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಮನೆ ಕುಸಿದು ಬೀಳುತ್ತಿದ್ದಂತೆ ಒಳಗಿರುವ ಸದಸ್ಯರು ಜೋರಾಗಿ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಧಾವಿಸಿ ಬಂದು ಮಣ್ಣಿನಲ್ಲಿ ಹೂತಿದ್ದ ಕೆಲವು ಜಾನುವಾರುಗಳು, ಗಾಯಾಳು ಮಹಿಳೆಯನ್ನು ರಕ್ಷಿಸಿದ್ದಾರೆ. ದುರ್ಘಟನೆಯಲ್ಲಿ ಆಕಳಿನ ಕಾಲು ಮುರಿದಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.