ಹೊಳಲು ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜ.13: ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದು ಶ್ರೀನಿವಾಸ ಪ್ರಸಾದ ಮಾಗಳ ಹೇಳಿದರು.
ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಗುರುಗಳು ಬೋಧನೆ ಜತೆಗೆ ಮಾನವೀಯ ಗುಣ, ನೈತಿಕ ಮೌಲ್ಯ, ಸಮುದಾಯದ ಪ್ರಜ್ಞೆ ಬೆಳೆಸಿದ್ದರಿಂದ ಅನೇಕರು ಇಂದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇಂದಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕು ಎಂದರು.
ಧಾರವಾಡದ ಯುವ ಬ್ರಿಗೇಡ್ ರಾಜ್ಯ ಪ್ರಮುಖ  ಕಿರಣರಾಮ ಮಾತನಾಡಿ ಪ್ರಕೃತಿ, ಸಮಾಜ, ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳನ್ನು ಸತ್ಕರಿಸಿ ಗೌರವಿಸಿದಾಗ ಮಾತ್ರ ಋಣದ ಭಾರವನ್ನು ಇಳಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಶಾಲೆಯೊಂದಿಗಿನ ಒಡನಾಟ, ಬಾಲ್ಯದ ನೆನಪು ನೆನೆದು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಮೇಲಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಹಾಗೂ ಗರುಮಾತೆಯರು ಕಾರ್ಯಕ್ರಮ ಉದ್ಘಾಟಿಸಿದರು. ಅಜಯ್ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಸ್ವಾಮಿ ವಿವೇಕಾನಂದ ಸ್ಥಬ್ಧ ಚಿತ್ರದ ಭವ್ಯ ಮೆರವಣಿಗೆ ನಡೆಯಿತು.