ಹೊಳಗುಂದಿಯಲ್ಲಿ ನವಣೆ ಬೆಳೆ ಕ್ಷೇತ್ರೋತ್ಸವ

ಬಳ್ಳಾರಿ,ನ.06: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಹೊಳಗುಂದಿಯ ಪ್ರಗತಿಪರ ರೈತರಾದ ಈಶ್ವರಗೌಡ್ರು ಅವರ ಜಮೀನಿನಲ್ಲಿ ಇತ್ತೀಚೆಗೆ “ನವಣೆ ಬೆಳೆ ಕ್ಷೇತ್ರೋತ್ಸವ” ವನ್ನು ಆಯೋಜಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ಎ.ಎಮ್.ಪಿ.ವಾಗೀಶರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಬೆಳೆಗಳನ್ನು ಅತ್ಯಂತ ನಿಷ್ಠೆಯಿಂದ ಬೆಳೆಯುತ್ತಿದ್ದು ಮತ್ತು ಇಳುವರಿಯನ್ನು ಕೂಡ ಪಡೆಯುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ; ಇದು ತುಂಬಾ ನೋವಿನ ಸಂಗತಿ. ಇದಕ್ಕಾಗಿ ಸರ್ಕಾರ ರೈತರಿಗೆ ಯಾವುದೇ ಸಬ್ಸಿಡಿ ನೀಡದೆ ಬೆಳೆದ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆಯನ್ನು ಕೊಟ್ಟಲ್ಲಿ ಮಾತ್ರ ರೈತರ ಶ್ರಮಕ್ಕೆ ಪ್ರತಿಫಲ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‍ನ ನಿವೃತ್ತ ವ್ಯವಸ್ಥಾಪಕರಾದ ಚಿನ್ನಪ್ಪ ಮಲ್ಕಿ ಒಡೆಯರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಯಲ್ಲಿ ಬಹಳ ಸಮಸ್ಯೆಗಳು ಇರುವುದು ನನಗೀಗ ಗಮನಕ್ಕೆ ಬರುತ್ತಿದೆ. ನಿಜವಾದ ಶ್ರಮ ಜೀವಿಯೆಂದರೇ ಒಬ್ಬ ರೈತ ಮತ್ತು ಇನ್ನೊಬ್ಬ ಸೈನಿಕ. ಈ ಇಬ್ಬರ ಋಣ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ. ಸಿ.ಎಮ್.ಕಾಲಿಬಾವಿ ಅವರು ಕೇಂದ್ರದ ಚಟುವಟಿಕೆಗಳ ಕುರಿತು ತಿಳಿಸಿದರು. ಕೇಂದ್ರದ ಕೀಟತಜ್ಞ ಹನುಮಂತಪ್ಪ ಶ್ರೀಹರಿ ಅವರು ಮಾತನಾಡಿ, ನವಣೆ ಬೆಳೆ, ತೊಗರಿ ಹಾಗೂ ಇನ್ನಿತರೆ ಹಿಂಗಾರಿ ಬೆಳೆಗಳಲ್ಲಿ ಬರುವ ಕೀಟ ಮತ್ತು ರೋಗಗಳ ಕುರಿತು ಮಾಹಿತಿ ನೀಡಿದರು.
ಹೊಳಗುಂದಿ ಗ್ರಾಮದ ಪ್ರಗತಿಪರ ರೈತ ಎಮ್.ಹಿರೇಗೌಡ್ರು, ಅನ್ನದಾನ ಸ್ವಾಮಿ ಹಾಗೂ ಇಟಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸೌಜನ್ಯ ರವರು ಭಾಗವಹಿಸಿ ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಯನ್ನು ನೀಡುವುದರ ಜೊತೆಗೆ ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಹೊಳಗುಂದಿ, ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿ ಕೃಷಿಯಲ್ಲಿ ಬರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಕೇಂದ್ರದ ಮಣ್ಣು ತಜ್ಞರಾದ ಡಾ. ಮಂಜುನಾಥ ಭಾನುವಳ್ಳಿ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.