ಹೊಳಕುಂದಾ ಸ್ಮಾರಕಗಳು ಇಂಡೋ ಇಸ್ಲಾಂ, ಇಂಡೋ ಬಹುಮನಿ, ಪರ್ಶೋ ಬಹುಮನಿ ಶೈಲಿಯಲ್ಲಿವೆ: ಡಾ. ವಾಣಿ

ಕಲಬುರಗಿ.ಏ.19:ಐತಿಹಾಸಿಕ ಹೊಳಕುಂದಾ ಗ್ರಾಮದಲ್ಲಿನ ಸ್ಮಾರಕಗಳು ಇಂಡೋ ಇಸ್ಲಾಂ, ಇಂಡೋ ಬಹುಮನಿ, ಪರ್ಶೋ ಬಹುಮನಿ ಶೈಲಿಯಲ್ಲಿವೆ ಎಂದು ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಶಂಭುಲಿಂಗ್ ಎಸ್. ವಾಣಿ ಅವರು ಹೇಳಿದರು.
ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಇನ್‍ಟ್ಯಾಕ್ ಅಧ್ಯಾಯದ ವತಿಯಿಂದ “ಹೊಳಕುಂದಾ ದರ್ಶನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಮಾರಕಗಳ ಅಭಿವೃದ್ಧಿಗೆ ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು 6 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದನ್ನು ಸ್ವಾಗತಿಸಿದರು.
ಗ್ರಾಮವು ಕ್ರಿ.ಶ. 15ನೇ ಶತಮಾನದಲ್ಲಿ ಇಸ್ಲಾಂ ಧರ್ಮದ ಒಂದು ಪ್ರಮುಖ ಕೇಂದ್ರವಾಗಿತ್ತು. ಬಹುಮನಿ ಸುಲ್ತಾನರು ತಮ್ಮ ರಾಜಧಾನಿಯನ್ನು ಕ್ರಿ.ಶ. 1422-1424ರಲ್ಲಿ ಕಲಬುರಗಿಯಿಂದ ಬೀದರಗೆ ವರ್ಗಾಯಿಸಿದರು. ಆಗ ದೇಶ-ವಿದೇಶಿಯ ಸಂತರು, ವಿದ್ವಾಂಸರು, ಪಂಡಿತರು ಗೋವಾ ಬಂದರು ಹಾಗೂ ದೆಹಲಿ ಮತ್ತು ದೌಲತಾಬಾದ್‍ಗಳ ಮೂಲಕ ಕಲಬುರ್ಗಿಯ ಮಾರ್ಗವಾಗಿ ಬೀದರಗೆ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಸುಲ್ತಾನರಿಂದ ಕೆಲವು ವಿಶ್ರಾಂತಿ ಧಾಮಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಹೊಳಕುಂದಾ ಗ್ರಾಮವೂ ಸಹ ಒಂದು. ಇದು ಸಂತರ ವಿಶ್ರಾಂತಿ ಧಾಮವಾಗಿತ್ತು ಎಂದು ಅವರು ಹೇಳಿದರು.
ಫಿರೋಜ್ ಶಹಾ ಖ್ವಾಜಾ ಬಂದಾನವಾಜರನ್ನು ಕಲಬುರ್ಗಿಗೆ ಆಹ್ವಾನಿಸಿದಂತೆ ಆತನ ಸಹೋದರ 1ನೇ ಅಹ್ಮದ್ ಶಹಾನು ಕೀರ್ಮಾನದ ಸಂತರನ್ನು ಬೀದರಗೆ ಆಹ್ವಾನಿಸಿದನು. ಶಹಾ ನೂರುಲ್ಲಾಹ ಕೀರ್ಮಾನಿಯವರು ಬೀದರಗೆ ಬಂದು ನೆಲೆ ನಿಂತು ಇಲ್ಲಿಯೇ ಅವರು ನಿಧನ ಹೊಂದಿದರು. ಅವರ ಸಮಾಧಿ ದರ್ಶನಕ್ಕೆ ಬರುವ ಅಪಾರ ಸಂಖ್ಯೆಯ ಧರ್ಮವಂತರು ಬೀದರಗೆ ಆಗಮಿಸುತ್ತಿದ್ದರು. ಅವರಲ್ಲಿ ಹಜರತ್ ಶರೀಫರು ಪ್ರಮುಖರಾಗಿದ್ದರು. ಸಂತರು ಹೊಳಕುಂದಾದಲ್ಲಿ ನೆಲೆ ನಿಂತು ಇಲ್ಲೆ ನಿಧನ ಹೊಂದಿದರು. ಅವರ ಸಮಾಧಿಯು ಹೊಳಕುಂದಾ ಗ್ರಾಮದಲ್ಲಿದೆ. ಅವರ ನಂತರ ಬಂದ ಹಲವು ಸಂತರು ಸಹ ಇದೇ ಗ್ರಾಮದಲ್ಲಿ ವಾಸವಾಗಿದ್ದು, ಇಲ್ಲೆ ನಿಧನ ಹೊಂದಿರುವ ಪ್ರಯುಕ್ತ ಇಲ್ಲಿ ಒಟ್ಟು ಏಳು ಸಮಾಧಿಗಳು ಹಾಗೂ ಒಂದು ಪ್ರಾರ್ಥನಾಲಯ ಈ ಪ್ರದೇಶದಲ್ಲಿ ಇದೆ. ಇದು ಹೊಳಕುಂದಾ ಸಾತಗುಂಬಜ್ ಎಂದು ಖ್ಯಾತ ಪಡೆದಿದೆ. ಇಲ್ಲಿಯ ಕಟ್ಟಡಗಳು ಇಂಡೋ-ಇಸ್ಲಾಂ, ಇಂಡೋ-ಬಹಮನಿ ಹಾಗೂ ಪರ್ಶೋ-ಬಹಮನಿ ಶೈಲಿಯಲ್ಲಿವೆ. ಗ್ರಾಮದ ಹೊರವಲಯದಲ್ಲಿ ಸುಮಾರು ಸಾವಿರಾರು ಸಂಖ್ಯೆಯ ಸಮಾಧಿಗಳು ಕಂಡು ಬರುತ್ತವೆ. ಎಲ್ಲ ಸಮಾಧಿಗಳು ಸಂತರ ಅನುಯಾಯಿಗಳದ್ದು ಆಗಿರಬಹುದು ಎಂದು ಅವರು ತಿಳಿಸಿದರು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಶಶಿಶೇಖರ್ ರೆಡ್ಡಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಪರಂಪರೆ ಮಹತ್ವವನ್ನು ಕುರಿತು, ಇಲ್ಲಿಯ ಪ್ರಮುಖ ಕಟ್ಟಡಗಳು ಹಾಗೂ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಪ್ರಾಧ್ಯಾಪಕ ಡಾ. ಭೀಮಣ್ಣ ಘನಾತೆ ಅವರು ವಿಜಯನಗರದ ಐತಿಹಾಸಿಕ ಪರಂಪರೆಯನ್ನು ಕುರಿತು ಮಾತನಾಡಿದರು. ಪ್ರಾಧ್ಯಾಪಕ ಡಾ. ಟಿ.ವ್ಹಿ. ಅಡವೇಶ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಸ್ವಾಯತ್ತ ಕಾಲೇಜು, ನಗರದ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇನ್‍ಟ್ಯಾಕ್ ಪದಾಧಿಕಾರಿಗಳು ಹಾಗೂ ಆಸಕ್ತರು ಪಾಲ್ಗೊಂಡಿದ್ದರು.