ಹೊಲಿ ಗೆ ತರಬೇತಿ ಪ್ರಮಾಣಪತ್ರ ವಿತರಣೆ .


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.15 ಜಾತಿ ತಾರತಮ್ಯ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ನ ಮ್ಯಾನೆಜಿಂಗ್ ಟ್ರಸ್ಟಿಯಾದ ಹೆಚ್.ಉಸ್ಮಾನ್ ಬಾಷ ಹೇಳಿದರು. ಅವರು ಪಟ್ಟಣದ ಉದ್ಯೋಗ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಕೇವಲ ದಲಿತರ ಪರವಾಗಿ ಹೋರಾಡದೇ ಎಲ್ಲಾ ಬಡಜನರ ಏಳಿಗೆಗಾಗಿ ಜೀವನಪರ್ಯಂತ ಸಾಕಷ್ಟು ದೌರ್ಜನ್ಯ, ಹಿಂಸೆ, ಅವಮಾನವನ್ನು ಅನುಭವಿಸಿದ್ದರು. ಸಂವಿಧಾನದಲ್ಲಿ ಎಲ್ಲಾರಿಗೂ ಸಮಾನವಾದ ಅವಕಾಶ ಹಕ್ಕುಗಳನ್ನು ಕಲ್ಪಿಸುವ ಮೂಲಕ ಅಸಾಮಾನತೆಯನ್ನು ತೊಡೆದುಹಾಕಲು ಯತ್ನಿಸಿದ್ದರು,  ಅವರು ಬರೆದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದೇ ಪ್ರತಿಯೊಬ್ಬರು ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು.
ಟ್ರಸ್ಟ್ ನ ಕಾರ್ಯದರ್ಶಿ ಶಂಷಾದ್ ಬೇಗಂ ಮಾತನಾಡಿ ನಮ್ಮ ಟ್ರಸ್ಟ್ ನಿಂದ ಮೂರು ತಿಂಗಳುಗಳ ಕಾಲ ನಿಮಗೆ ನೀಡಿದ ಉಚಿತ ತರಬೇತಿಯಿಂದ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲರಾಗಿ ಸ್ವಾಭಿಮಾನ, ಗೌರವ ಮತ್ತು ಘನತೆಯಿಂದ ಬದುಕುವಂತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿ ಟಿ.ಶೋಭರವರು ಮಾತನಾಡಿ ಟ್ರಸ್ಟ್ ನಿಂದ ನೀಡಿದ ತರಬೇತಿ ನಮಗೆ ತುಂಬ ಉಪಯುಕ್ತವಾಗಿದೆ, ಇದರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಟ್ರಸ್ಟ್ ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಟ್ರಸ್ಟ್ ನ ಅಧ್ಯಕ್ಷೆ ಜಿ. ಸರೋಜ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದರು.
ಟ್ರಸ್ಟ್ ನ ಗೌರವ ಅಧ್ಯಕ್ಷ ಮಕ್ಕಳ ಮೇಷ್ಟ್ರು ಎಲ್. ರೆಡ್ಡಿನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ನಡೆದ ವಿವಿಧ ಆಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು ಮತ್ತು ಹೊಲಿಗೆ ತರಬೇತಿ ಪಡೆದ ಶಿಭಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.