ಹೊರವಲಯದ ಚಿತಾಗಾರಗಳಲ್ಲಿ ಆರದ ಬೆಂಕಿ:ಮಳೆ ಬಂದರೆ ಸಮಸ್ಯೆ ಉಲ್ಬಣ

 • ಹಾಲನೂರು ಆರ್ ರವೀಶ್
  ಬೆಂಗಳೂರು,ಮೇ.೩: ನಗರದ ಹೊರವಲಯದಲ್ಲಿ ಕೋವಿಡ್ ಶವಗಳ ಅಂತ್ಯಸಂಸ್ಕಾರಕ್ಕೆ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಚಿತಾಗಾರಗಳಲ್ಲಿ ಆರಂಭಗೊಂಡು ೯ ದಿನ ಆದರೂ ಚಿತೆಗಳಲ್ಲಿ ಬೆಂಕಿ ಆರಿಲ್ಲ.ನಿತ್ಯ ೫೦ ರಿಂದ ೧೦೦ ಹೆಣಗಳ ಸಾಮೂಹಿ ಅಂತ್ಯಕ್ರಿಯೆ ನಿಲ್ಲದೇ ಸಾಗಿದೆ.ಆದರೆ,ಪಾಲಿಕೆ ವ್ಯಾಪ್ತಿಯ ಚಿತಾಗಾರಗಳ ಮೇಲಿನ ಒತ್ತಡ ಕಡಿಮೆಯಾಗಿದೆ.ನಾಗರಿಕರ ಆಕ್ರೋಶ ತಣ್ಣಗಾಗಿದೆ.
  ನಗರದಲ್ಲಿ ಕೋವಿಡ್ ಸೋಂಕಿತರ ಸಾವು ಮಿತಿಮೀರಿದ ಹಿನ್ನೆಲೆಯಲ್ಲಿ ಶವಗಳ ಸಂಸ್ಕಾರಕ್ಕೆ ತೀವ್ರ ಸಮಸ್ಯೆ ತಲೆದೋರಿತ್ತು.ಅದರ ಪರಿಹಾರವಾಗಿ ರಾಜ್ಯ ಸರ್ಕಾರ ಹೊರವಲಯದ ಎರಡು ಕಡೆ ಗೋಮಾಳಗಳಲ್ಲಿ ಶವಗಳ ಸಂಸ್ಕಾರಕ್ಕೆ ಅವಕಾಶ ಮಾಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆ ಬಗೆಹರಿದಿದೆ.ವರುಣನ ಸಹಕಾರದಿಂದಾಗಿ ಇದು ಸಾಧ್ಯವಾಗಿದೆ.ಮಳೆ ಏನಾದರೂ ಸುರಿದಿದ್ದಲ್ಲಿ,ಬಯಲು ಪ್ರದೇಶವಾದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿತ್ತು.
  ಕೋವಿಡ್ ಸಾವಿನ ಸಂಖ್ಯೆ ಹೆಚ್ಚಳದಿಂದಾಗಿ ಪಾಲಿಕೆ ನಿರ್ವಹಣೆಯ ಚಿತಾಗಾರಗಳ ಮೇಲಿನ ಒತ್ತಡ ತಗ್ಗಿಸಲು ನಗರದ ಹೊರವಲಯದ ತಾವರೆಕೆರೆ ಸಮೀಪದ ಗಿಡ್ಡೇನಹಳ್ಳಿ ಹಾಗೂ ಕುರುಬರಹಳ್ಳಿಯಲ್ಲಿ ಸೌದೆಯಿಂದ ಸುಡುವ ಚಿತಾಗಾರಗಳನ್ನು ಕಳೆದ ೨೫ ನೇ ತಾರೀಖಿನಿಂದ ಆರಂಭಿಸಲಾಗಿದ್ದು.ಇದರಿಂದ ಸಾಕಷ್ಟು ಅನುಕೂಲವಾಗಿದೆ.ಇಲ್ಲದಿದ್ದರೆ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು.
  ಕುರುಬರಹಳ್ಳಿಯಲ್ಲಿ ೨೦ ಹಾಗೂ ಗಿಡ್ಡೇನಹಳ್ಳಿಯಲ್ಲಿ ೨೫ ಶವಗಳನ್ನು ಒಟ್ಟಿಗೇ ಸುಡುವಂತಹ ವ್ಯವಸ್ಥೆ ಆಗಿದೆ.ಎರಡು ಪಾಳಿಯಲ್ಲಿ ಒಟ್ಟು ೯೦ ಹೆಣಗಳನ್ನು ಇಲ್ಲಿ ಸುಡಬಹುದು.ಇದರಿಂದಾಗಿ ನಗರದ ಚಿತಾಗಾರಗಳ ಮೇಲಿನ ಒತ್ತಡ ಕಡಿಮೆಯಾಗಿದೆ.ಚಿತಾಗಾರಗಳ ಮುಂದೆ ನಿಲ್ಲುತ್ತಿದ್ದ ಶವಗಳ ಆಂಬುಲೆನ್ಸ್ ಸಾಲು ಸಹ ಕಡಿಮೆ ಆಗಿದೆ.
  ಬೆಂಗಳೂರು ನಾಗರಿಕರ ಪ್ರಾರ್ಥನೆ ಫಲವೋ ಇಲ್ಲಾ,ರಾಜ್ಯ ಸರ್ಕಾರದ ಪುಣ್ಯವೋ ಗೊತ್ತಿಲ್ಲ,ವರುಣ ಸಾಕಷ್ಟು ಸಹಕರಿಸಿದ್ದಾನೆ.ಹೊರವಲಯದಲ್ಲಿ ಓಪನ್ ಸ್ಮಶಾನಗಳು ಆರಂಭಗೊಂಡು ೯ ದಿನ ಕಳೆದಿದ್ದು ಮಳೆರಾಯ ಸಹಕಾರ ನೀಡಿದ್ದಾನೆ.ಮಳೆ ಏನಾದರೂ ಸುರಿದಿದ್ದರೆ ಶವಗಳನ್ನು ಸುಡಲು ತಂದು ಹಾಕಿರುವ ಕಟ್ಟಿಗೆಗಳು ಒದ್ದೆಯಾಗಿದ್ದರೆ ಸಮಸ್ಯೆ ಉಲ್ಬಣಿಸುತ್ತಿತ್ತು.ನಿನ್ನೆ ಭಾನುವಾರ ೬೦ ಕ್ಕೂ ಹೆಚ್ಚು ಶವಗಳನ್ನು ಈ ಎರಡು ಕಡೆ ಸುಡಲಾಗಿದೆ.ಇಲ್ಲಿ ಮೃತರ ಕಡೆಯವರ ಆಕ್ರಂದನ ನಿಂತೇ ಇಲ್ಲ.೨೫ ನೇ ತಾರೀಖಿನಿಂದ ಇಂದಿನವರೆಗೂ ಇಲ್ಲಿ ಅಂತ್ಯಸಂಸ್ಕಾರಗಳಿಗೆ ಕೊನೆಯೇ ಕಂಡಿಲ್ಲ.ಹಗಲು ರಾತ್ರಿ ಬೆಂಕಿ ಆರಿಲ್ಲ.
  ಅರಣ್ಯ ಇಲಾಖೆ ಅಗತ್ಯವಾದ ಸೌದೆಗಳನ್ನು ಒದಗಿಸುತ್ತಿದ್ದಾರೆ.ಸಂಪ್ರದಾಯ ಬದ್ಧವಾಗಿ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಸೌಲಭ್ಯ ಇರುವುದರಿಂದ ಹೆಚ್ಚಿನ ಸಂಖ್ಯೆಯ ಶವಗಳನ್ನು ಈಗ ಇತ್ತ ತರಲಾಗುತ್ತಿದೆ.ಕೋವಿಡ್ ಸೋಂಕಿತ ಶವಗಳನ್ನು ಸುಡಲು ಮೇಡಿ ಅಗ್ರಹಾರ, ಕೂಡ್ಲು,ಪಣತ್ತೂರು,ಕೆಂಗೇರಿ,ಸುಮನಹಳ್ಳಿ,ಪೀಣ್ಯ ಮತ್ತು ಬನಶಂಕರಿ ಚಿತಾಗಾರಗಳಲ್ಲಿ ಅವಕಾಶ ಮಾಡಲಾಗಿದೆ.ಈ ೭ ಚಿತಾಗಾರಗಳಲ್ಲಿ ಒಂದು ಎರಡು ಶವಗಳನ್ನು ಮಾತ್ರ ಸುಡಲು ಸಾಧ್ಯ.ಒಂದು ಶವ ಸಂಸ್ಕಾರಕ್ಕೆ ಕನಿಷ್ಠ ೩ ಗಂಟೆ ಸಮಯ ಬೇಕು.ಅಂತಹದರಲ್ಲಿ ನೂರರ ಗಡಿ ದಾಟಿ ಕೋವಿಡ್ ಶವಗಳು ಬಂದರೆ ಅದನ್ನು ನಿಭಾಯಿಸಲು ಹೇಗೆ ಸಾಧ್ಯ.ಇದರಿಂದ ಕಂಗೆಟ್ಟು ಹೋಗಿದ್ದ ರಾಜ್ಯ ಸರ್ಕಾರ ಕೊನೆಗೆ ಒಂದು ನಿರ್ಧಾರಕ್ಕೆ ಬಂದು ಗಿಡ್ಡೇನಹಳ್ಳಿ ಹಾಗೂ ಕುರುಬರಹಳ್ಳಿ ಗೋಮಾಳಗಳಲ್ಲಿ ಶವಸಂಸ್ಕಾರಕ್ಕೆ ಅವಕಾಶ ಮಾಡಿದ್ದು ಬಹಳ ಅನುಕೂಲವಾಗಿದೆ.
  ವಿದ್ಯುತ್ ಚಿತಾಗಾರಗಳಲ್ಲಿ ಬಿಡುವಿಲ್ಲದೆ,ಹೆಣ ಸುಡುವುದರಿಂದ ಯಂತ್ರ ಕೆಟ್ಟು ಹೋಗುತ್ತದೆ,ಹೊಗೆ ಹೋಗುವ ಚಿಮಣಿ ಕೆಂಪಾಗುತ್ತವೆ ಎಂಬ ಆತಂಕ ಇರುತ್ತದೆ.ಈ ರೀತಿಯ ಸಮಸ್ಯೆಗಳು ಓಪನ್ ಚಿತಾಗಾರಗಳಲ್ಲಿ ತಲೆದೋರುವುದಿಲ್ಲ.ಮಳೆ ಬಂದರೆ ಮಾತ್ರ ಊಹಿಸಲಸಾಧ್ಯವಾದ ತೊಂದರೆಗಳು ತಲೆದೋರಬಹುದು.
  ಸೌದೆಗಳ ರಾಶಿ ನೆನೆಯುತ್ತವೆ,ಸ್ಮಶಾನಕ್ಕೆ ಬರುವ ವಾಹನಗಳು ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು,ಒಣ ಸೌದೆ ಕೊರತೆ ಆಗಬಹುದು ಇತ್ಯಾದಿ…
  ಗಿಡ್ಡೇನಹಳ್ಳಿ ಹಾಗೂ ಕುರುಬರಹಳ್ಳಿ ಸ್ಮಶಾನಗಳಿಗೆ ಶವ ಸಾಗಿಸುವುದು ಅಂದರೆ ಆಂಬುಲೆನ್ಸ್ ನವರೂ ಮುಂದೆ ಬರುತ್ತಾರಂತೆ,ಯಾಕಂದರೆ,ಇಲ್ಲಿ ಶವಸಂಸ್ಕಾರಕ್ಕೆ ತಡವಾಗುವುದಿಲ್ಲ.ಬೇಗ ಇಳಿಸಿ ಹೋಗಬಹುದು ಎಂಬ ಲೆಕ್ಕಾಚಾರ ಅವರದ್ದು.ಒಟ್ಟಿನಲ್ಲಿ ಮಳೆರಾಯ ಎಲ್ಲಿಯವರೆಗೆ ಸಹಕರಿಸುತ್ತಾನೋ ಅಲ್ಲಿಯವರೆಗೆ ತೊಂದರೆ ಇಲ್ಲ,ಧಾರಾಕಾರ ಮಳೆ ಸುರಿದರೆ ಆ ದೇವರೇ ಗತಿ ಎಂಬ ಪರಿಸ್ಥಿತಿ ಎದುರಾಗಲಿದೆ.