ಹೊರರಾಜ್ಯದ ಮೀನುಗಳಲ್ಲಿ ಫೊರ್ಮಾಲಿನ್ ಬಗ್ಗೆ ಪರಿಶೀಲನೆ

ಉಡುಪಿ, ಜ.೬- ಇತ್ತೀಚೆಗೆ ಜಿಲ್ಲೆಯ ಮೀನುಗಳಲ್ಲಿ ಫೊರ್ಮಾಲಿನ್ ಬಳಕೆ ಕುರಿತು ಪರಿಶೀಲನೆ ನಡೆಸಿದ್ದು, ಅದರಲ್ಲಿ ಯಾವುದೇ ರಾಸಾಯಿನಿಕ ಅಂಶ ಪತ್ತೆಯಾಗಿಲ್ಲ. ಆದರೆ ಹೊರರಾಜ್ಯದಿಂದ ಜಿಲ್ಲೆಗೆ ಬರುವ ಮೀನುಗಳಲ್ಲಿ ಫೊರ್ಮಾಲಿನ್ ಇರುವ ಕುರಿತು ಪರಿಶೀಲಿಸುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕುಂಜಿ ಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ವಸ್ತುಗಳಲ್ಲಿ ಕಲಬೆರಕೆ ಕಂಡುಬಂದರೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಉತ್ತಮ ಗುಣ ಮಟ್ಟದ ಸರಕು ಮತ್ತು ಸೇವೆಯನ್ನು ಪಡೆಯುವ ತಮ್ಮ ಹಕ್ಕುಗಳ ಕುರಿತು ಗ್ರಾಹಕರು ಎಚ್ಚೆತ್ತುಕೊಂಡರೆ ಗ್ರಾಹಕ ಜಾಗೃತಿಯಲ್ಲಿ ಸುಧಾರಣೆಯಾಗಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಗ್ರಾಹಕನಾಗಿದ್ದು, ತಾವು ಖರೀದಿಸುವ ಸರಕು ಮತ್ತು ಪಡೆಯುವ ಸೇವೆಗಳಲ್ಲಿ ಯಾವುದೇ ಕೊರತೆ ಉಂಟಾದರೆ, ಗ್ರಾಹಕ ವೇದಿಕೆಗಳ ಮೂಲಕ ಸೂಕ್ತ ಸೇವೆ ಪಡೆಯಲು ಸಾಧ್ಯವಿದೆ ಎಂದರು. ಮೊಬೈಲ್ ಕಂಪೆನಿಗಳು ೪ಜಿ ಎಂದು ಇಂಟರ್ನೆಟ್ ಸಂಪರ್ಕ ನೀಡುತ್ತಿದ್ದು, ಇದರಲ್ಲಿ ಎಷ್ಟು ಎಂಬಿಪಿಎಸ್ ವೇಗ ಇದೆ ಎಂದು ಯಾರೂ ಪರಿಶೀಲನೆ ನಡೆಸುವುದಿಲ್ಲ. ಇದರಿಂದ ಕೂಡ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ವ್ಯಾಪಾರಿಗಳು ಮಾತ್ರವಲ್ಲದೆ ಸರಕಾರಿ ಸೇವೆ ನೀಡುವ ಅಧಿಕಾರಿಗಳೂ ಸಹ ಗ್ರಾಹಕ ಸೇವೆಯ ವ್ಯಾಪ್ತಿಗೆ ಒಳಪಡುತ್ತಾರೆ. ನಾಗರಿಕರಿಗೆ ಸಕಾಲದಲ್ಲಿ ಸರಕಾರಿ ಸೇವೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಆನ್‌ಲೈನ್ ಶಾಂಪಿಂಗ್‌ನಲ್ಲಿ ಸರಕು ಖರೀದಿಸುವಾಗ ಹೆಚ್ಚಿನ ಮೋಸವಾಗುತ್ತಿದ್ದು ಇದನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಮೊಬೈಲ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಲ್ಲದಕ್ಕೂ ಒಪ್ಪಿಗೆ ನೀಡುವುದು ಅಗತ್ಯ ಇರುವುದಿಲ್ಲ. ಇದರಿಂದ ಅನಾನುಕೂಲವೇ ಹೆಚ್ಚು ಎಂದು ಹೇಳಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಮಾತನಾಡಿ, ಹೊಸ ಗ್ರಾಹಕರ ಸಂರಕ್ಷಣಾ ಕಾಯಿದೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ಈ ಹಿಂದೆ ಪ್ರಕರಣ ದಾಖಲಿಸುವಾಗ ಆ ವಸ್ತು ತಯಾರಾದ ಸ್ಥಳದಲ್ಲೇ ಪ್ರಕರಣ ದಾಖಲಿಸಬೇಕಾಗಿತ್ತು. ಹೊಸ ಕಾಯಿದೆ ಯಲ್ಲಿ ನೀವು ವಾಸವಿರುವ ಸ್ಥಳದಲ್ಲೇ ಪ್ರಕರಣ ದಾಖಲಿಸಬಹುದು. ಅಲ್ಲದೇ ಪರಿಹಾರ ಪಡೆಯುವ ಮೊತ್ತವೂ ಕೂಡ ಅಧಿಕವಾಗಿದೆ. ಮುಂದೆ ಜಿಲ್ಲೆಯಲ್ಲಿ ಗ್ರಾಹಕ ಕೌನ್ಸಿಲ್ ಆರಂಭಗೊಳ್ಳಲಿದ್ದು, ಜಿಲ್ಲಾಧಿಕಾರಿ ಇದರ ಮುಖ್ಯಸ್ಥರಾಗಲಿದ್ದಾರೆ ಎಂದು ಅವರು ತಿಳಿಸಿದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿದರು. ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ನಿರ್ಮಲಾ ಕುಮಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ ಉಪಸ್ಥಿತರಿದ್ದರು.